ಬೆಂಗಳೂರು | ಸೈಟ್‍ಗಳ ಒತ್ತುವರಿ ಆರೋಪ: ಮಾಜಿ ಕಾರ್ಪೊರೇಟರ್ ಬಂಧನ

ಬೆಂಗಳೂರು, ಫೆ.13: ಸಿಎ ಹಾಗೂ ಪಾರ್ಕ್ ಜಾಗವನ್ನು ಸೈಟ್‍ಗಳಾಗಿ ಒತ್ತುವರಿ ಮಾಡಿದ ಆರೋಪದ ಹಿನ್ನೆಲೆ, ಮಂಗಮ್ಮನಪಾಳ್ಯ ವಾರ್ಡ್ ಮಾಜಿ ಕಾರ್ಪೊರೇಟರ್ ಜಗದೀಶ ಎಂ.ಆರ್.ನನ್ನು ಪೊಲೀಸರು ಬಂಧಿಸಿದ್ದಾರೆ.
ಬೇಗೂರು ಹೋಬಳಿಯ ಏಳುಕುಂಟೆ ಗ್ರಾಮದ ಜಮೀನಿನಲ್ಲಿ ಲೇಔಟ್ ನಿರ್ಮಿಸಲು ಸರಕಾರ ಭೂಮಿಯನ್ನು ನೀಡಿತ್ತು. ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ಬಿಡಿಎ ಅನುಮತಿ ಅನ್ವಯ ಲೇಔಟ್‍ಗೆ ಹಸ್ತಾಂತರಿಸಿತ್ತು. ಲೇಔಟ್ ಪ್ರಕಾರ 6 ಪಾರ್ಕ್ ಹಾಗೂ 4 ಸಿಎ ಜಾಗವನ್ನು ಬಿಡಬೇಕಾಗಿತ್ತು. ಆದರೆ, ಪಾರ್ಕ್ ಹಾಗೂ ಸಿಎ ಜಾಗವನ್ನು ಸೈಟಾಗಿ ಪರಿವರ್ತಿಸುವಂತಹ ಕೆಲಸ ಮಾಡಲಾಗಿದ್ದು, ಅಲ್ಲದೆ, ಒತ್ತುವರಿ ಮಾಡಿರುವ ಸಂಬಂಧ ಬಿಡಿಎ ಕಾರ್ಯನಿರ್ವಾಹನ ಇಂಜಿನಿಯರ್ ಬಿಎಂಟಿಎಫ್‍ಗೆ ದೂರು ನೀಡಿದ ಮೇರೆಗೆ ಬಿಡಿಎ ಕಾಯ್ದೆ ಸೆಕ್ಷನ್ 420, 468, 448, ಆರ್.ವಿ 33ಎ ಹಾಗೂ 72ರ ಅಡಿಯಲ್ಲಿ ಬಿಎಂಟಿಎಫ್ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಾಜಿ ಕಾರ್ಪೊರೇಟರ್ ಜಗದೀಶ್‍ನನ್ನು ಬಂಧಿಸಿದೆ.
ಈ ಬಗ್ಗೆ ಬಿಎಂಟಿಎಫ್ ಎಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಮಾತನಾಡಿ, ಸ್ಥಳೀಯ ವಾಸಿಗರ ದೂರಿನ ಅನ್ವಯ 5 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕುರಿತಂತೆ ಬಿಡಿಎ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸಿಎ ನಿವೇಶನ ಒತ್ತುವರಿ ಮಾಡಿಕೊಂಡಿರುವುದಾಗಿ ವರದಿ ನೀಡಿದ್ದರು. ಅದರಂತೆ ಮಾಜಿ ಕಾರ್ಪೊರೇಟರ್ ಜಗದೀಶ್ ಬಂಧಿಸಲಾಯಿತು. ಉಳಿದವರು ತಲೆಮರೆಸಿಕೊಂಡಿದ್ದಾರೆ. ಪ್ರಕರಣ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.







