ತಕ್ಷಣವೇ ರಶ್ಯವನ್ನು ತೊರೆಯಲು ನಾಗರಿಕರಿಗೆ ಅಮೆರಿಕ ಸೂಚನೆ

ವಾಷಿಂಗ್ಟನ್, ಫೆ.13: ಉಕ್ರೇನ್ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ , ರಶ್ಯದಲ್ಲಿ ಕಾನೂನುಜಾರಿ ಅಧಿಕಾರಿಗಳಿಂದ ಅನಿಯಂತ್ರಿತ ಬಂಧನ ಅಥವಾ ಕಿರುಕುಳದ ಅಪಾಯ ಇರುವುದರಿಂದ ತಕ್ಷಣ ರಶ್ಯವನ್ನು ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ಸೂಚಿಸಿದೆ.
ಅಕ್ರಮ ಬಂಧನದ ಅಪಾಯ ಇರುವುದರಿಂದ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಆದ್ದರಿಂದ ರಶ್ಯದಲ್ಲಿ ವಾಸಿಸುತ್ತಿರುವ ಅಥವಾ ರಶ್ಯಕ್ಕೆ ಪ್ರವಾಸ ತೆರಳಿರುವ ಅಮೆರಿಕನ್ನರು ತಕ್ಷಣ ಅಲ್ಲಿಂದ ತೆರಳಬೇಕು ಎಂದು ರಶ್ಯದಲ್ಲಿನ ಅಮೆರಿಕದ ರಾಯಭಾರ ಕಚೇರಿ ಹೇಳಿದ್ದು ರಶ್ಯಕ್ಕೆ ಪ್ರಯಾಣಿಸದಂತೆ ಪ್ರಜೆಗಳನ್ನು ಎಚ್ಚರಿಸಿದೆ.
ರಶ್ಯನ್ ಭದ್ರತಾ ಪಡೆಗಳು ಅಮೆರಿಕದ ಪ್ರಜೆಗಳನ್ನು ನಕಲಿ ಆರೋಪದ ಮೇಲೆ ಬಂಧಿಸಿವೆ. ಬಂಧನ ಮತ್ತು ಕಿರುಕುಳದ ಉದ್ದೇಶದಿಂದ ರಶ್ಯದಲ್ಲಿರುವ ಅಮೆರಿಕನ್ ಪ್ರಜೆಗಳನ್ನು ಪ್ರತ್ಯೇಕಿಸಿ ಅವರಿಗೆ ನ್ಯಾಯಸಮ್ಮತ ಮತ್ತು ಪಾರದರ್ಶಕ ವಿಚಾರಣೆಯನ್ನು ನಿರಾಕರಿಸುವ ಜತೆಗೆ, ವಿಶ್ವಾಸಾರ್ಹ ಪುರಾವೆಗಳಿಲ್ಲದಿದ್ದರೂ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
ರಶ್ಯದ ಅಧಿಕಾರಿಗಳು ಅಮೆರಿಕದ ಧಾರ್ಮಿಕ ಕಾರ್ಯಕರ್ತರ ವಿರುದ್ಧ ಸ್ಥಳೀಯ ಕಾನೂನುಗಳನ್ನು ನಿರಂಕುಶವಾಗಿ ಜಾರಿಗೊಳಿಸುವ ಜತೆಗೆ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿರುವ ಅಮೆರಿಕನ್ ನಾಗರಿಕರ ವಿರುದ್ಧ ಪ್ರಶ್ನಾರ್ಹ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.