ಅದಾನಿ ವಿವಾದದ ಕುರಿತು ತಜ್ಞರ ಸಮಿತಿ ರಚನೆಗೆ ಆಕ್ಷೇಪವಿಲ್ಲ: ಕೇಂದ್ರ

ಹೊಸದಿಲ್ಲಿ, ಫೆ. 13: ಶೇರು ಮಾರುಕಟ್ಟೆಯ ನಿಯಂತ್ರಕ ವ್ಯವಸ್ಥೆಯನ್ನು ಬಲಪಡಿಸಲು ತಜ್ಞರ ಸಮಿತಿ ರೂಪಿಸುವ ಪ್ರಸ್ತಾವಕ್ಕೆ ತನಗೆ ಯಾವುದೇ ಆಕ್ಷೇಪ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಅದಾನಿ ಸಮೂಹದ ಶೇರು ವಂಚನೆ ಹಗರಣದ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆ ನಿಯಂತ್ರಕ ವ್ಯವಸ್ಥೆಯನ್ನು ಬಲಪಡಿಸಲು ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಕಳೆದ ವಾರ ಸಲಹೆ ನೀಡಿತ್ತು.
ಅದಾನಿ ಸಮೂಹದ ವಂಚನೆಗೆ ಸಂಬಂಧಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಆದರೆ, ಸಮಿತಿಗೆ ತಜ್ಞರ ಹೆಸರು ನೀಡಲು ಹಾಗೂ ಸಮಿತಿಯ ಅಧಿಕಾರ ವ್ಯಾಪ್ತಿಯ ವಿವರಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಲು ತಾನು ಬಯಸುವುದಾಗಿ ಕೇಂದ್ರ ಸರಕಾರ ತಿಳಿಸಿತು.
ಕೇಂದ್ರ ಸರಕಾರ ಹಾಗೂ ಸೆಬಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿಂಡೆನ್‌ಬರ್ಗ್ ವರದಿಯಿಂದ ಉದ್ಭವಿಸುವ ಪ್ರಸಕ್ತ ಸನ್ನಿವೇಶ ಎದುರಿಸಲು ಮಾರುಕಟ್ಟೆ ನಿಯಂತ್ರಕ ಹಾಗೂ ಇತರ ಶಾಸನಾತ್ಮಕ ಸಂಸ್ಥೆಗಳು ಸಿದ್ಧವಾಗಿವೆ ಎಂದು ತಿಳಿಸಿದರು.
ಸಮಿತಿ ರೂಪಿಸಲು ಸರಕಾರಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ, ಸಮಿತಿಯ ವ್ಯಾಪ್ತಿಯ ಬಗ್ಗೆ ನಾವು ಸಲಹೆ ನೀಡುತ್ತೇವೆ. ಹೆಸರುಗಳನ್ನು ನಾವು ಒದಗಿಸುತ್ತೇವೆ ಎಂದು ಮೆಹ್ತಾ ತಿಳಿಸಿದರು.







