ಟರ್ಕಿ-ಸಿರಿಯಾ ಭೂಕಂಪ ರಕ್ಷಣಾ ಕಾರ್ಯಾಚರಣೆ ಮುಕ್ತಾಯದತ್ತ: ವಿಶ್ವಸಂಸ್ಥೆ

ದಮಾಸ್ಕಸ್, ಫೆ.13: ಒಂದು ವಾರದ ಹಿಂದೆ ಟರ್ಕಿ ಮತ್ತು ಸಿರಿಯಾವನ್ನು ನಡುಗಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ರಕ್ಷಣಾ ಕಾರ್ಯಾಚರಣೆಯ ಹಂತ ಮುಕ್ತಾಯದತ್ತ ಬಂದಿದ್ದು ಇದೀಗ ಆದ್ಯತೆಯನ್ನು ತುರ್ತಾಗಿ ಆಶ್ರಯ, ಆಹಾರ, ಶಾಲಾ ಶಿಕ್ಷಣ ಮತ್ತು ಮನೋಸಾಮಾಜಿಕ ಆರೈಕೆಯತ್ತ ಬದಲಾಯಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.
ಸಿರಿಯಾಕ್ಕೆ ಭೇಟಿ ನೀಡಿ ಭೂಕಂಪ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಅವರು, ಈಗಾಗಲೇ ದೀರ್ಘಾವಧಿಯ ಅಂತರ್ಯುದ್ಧದಿಂದ ಜರ್ಜರಿತಗೊಂಡಿರುವ ಸಿರಿಯಾದ ಜನತೆಗೆ ಪ್ರಾಕೃತಿಕ ದುರಂತ ನೀಡಿದ ಆಘಾತದ ಬಗ್ಗೆ ಜಾಗತಿಕ ಸಮುದಾಯಕ್ಕೆ ಅರಿವಿದೆ ಎಂದರು. ಸಿರಿಯಾದಲ್ಲಿ ಸರಕಾರದ ನಿಯಂತ್ರಣದಲ್ಲಿರುವ ಪ್ರದೇಶ ಹಾಗೂ ಬಂಡುಗೋರ ಪಡೆಗಳ ನಿಯಂತ್ರಣದಲ್ಲಿರುವ ವಾಯವ್ಯದ ಗಡಿಭಾಗಕ್ಕೆ ವಿಶ್ವಸಂಸ್ಥೆಯ ನೆರವನ್ನು ಸಮಾನವಾಗಿ ವಿತರಿಸಲಾಗುವುದು. ಸರಕಾರದ ನಿಯಂತ್ರಣದಲ್ಲಿರುವ ಪ್ರದೇಶದಿಂದ ವಾಯವ್ಯ ಸಿರಿಯಾದತ್ತ ನೆರವನ್ನು ಹೊತ್ತ ವಾಹನಗಳು ಸಂಚರಿಸುತ್ತಿವೆ ಎಂದು ಹೇಳಿದ್ದಾರೆ.
ಮೃತರ ಸಂಖ್ಯೆ 35 ಸಾವಿರಕ್ಕೂ ಅಧಿಕ: ವರದಿ
ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 35,000ದ ಗಡಿ ದಾಟಿದ್ದು ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಕ್ತಾಯ ಹಂತ ತಲುಪಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ 13ರವರೆಗಿನ ಅಂಕಿಅಂಶದ ಪ್ರಕಾರ, ಟರ್ಕಿಯಲ್ಲಿ 31,643 ಮಂದಿ ಮತ್ತು ಸಿರಿಯಾದಲ್ಲಿ 3,581 ಮಂದಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 35,224ಕ್ಕೇರಿದೆ. ಸಿರಿಯಾದ ಯುದ್ಧಗ್ರಸ್ತ ಪ್ರದೇಶಗಳಿಗೆ ತನ್ಮೂಲಕ ಅಗತ್ಯವಿರುವ ನೆರವನ್ನು ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ವಿಶ್ವಸಂಸ್ಥೆ ಖಂಡಿಸಿದ್ದು, ದಿನ ಕಳೆದಂತೆಲ್ಲಾ ಭೂಕಂಪಪೀಡಿತ ಪ್ರದೇಶದಲ್ಲಿ ಅವಶೇಷಗಳಡಿಯಿಂದ ಜನರನ್ನು ಜೀವಂತವಾಗಿ ರಕ್ಷಿಸುವ ಭರವಸೆ ಕ್ಷೀಣಿಸುತ್ತಿದೆ ಎಂದಿದೆ. ಈ ಮಧ್ಯೆ, ಭೂಕಂಪದ ಕೇಂದ್ರಬಿಂದುವಿನ ಸನಿಹದಲ್ಲಿರುವ ಕಹ್ರಮನ್ಮರಸ್ನಲ್ಲಿ 30,000 ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ. 48,000 ಜನರಿಗೆ ಶಾಲೆಗಳಲ್ಲಿ, 11,500 ಜನರಿಗೆ ಕ್ರೀಡಾ ಸಂಕೀರ್ಣಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.
7 ಪ್ರಾಂತಗಳಲ್ಲಿ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು ಉಳಿದೆಡೆ ರಕ್ಷಣಾ ತಂಡಗಳು ಅಂತಿಮ ಹಂತದ ಕಾರ್ಯಾಚರಣೆ ಮುಂದುವರಿಸಿವೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೆಮಾನ್ ಸೊಯ್ಲು ಹೇಳಿದ್ದಾರೆ. ಭೂಕಂಪದಿಂದ 1,08,000 ಕಟ್ಟಡಗಳಿಗೆ ಹಾನಿಯಾಗಿದ್ದು 4 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಟರ್ಕಿ ಸರಕಾರ ಹೇಳಿದೆ.
ಅತ್ಯಾಧುನಿಕ ಸಾಧನಗಳಿಲ್ಲದ ಕಾರಣ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕುಸಿದು ಬಿದ್ದ ಕಲ್ಲುಮಣ್ಣಿನ ರಾಶಿಯನ್ನು ಸಲಿಕೆ ಅಥವಾ ಕೈಗಳಿಂದ ಅಗೆಯಬೇಕಾದ್ದರಿಂದ ರಕ್ಷಣಾ ಕಾರ್ಯ ವಿಳಂಬವಾಗಿದೆ. ಇಲ್ಲದಿದ್ದರೆ ಇನ್ನಷ್ಟು ಮಂದಿಯನ್ನು ರಕ್ಷಿಸಬಹುದಿತ್ತು ಎಂದು ವಾಯವ್ಯ ಸಿರಿಯಾದ ಜಬ್ಲೇಹ್ ನಗರದಲ್ಲಿ ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಅಲಾ ಮುಬಾರಕ್ ಹೇಳಿರುವುದಾಗಿ ವರದಿಯಾಗಿದೆ.
ಟರ್ಕಿ: ಕಟ್ಟಡ ಗುತ್ತಿಗೆದಾರರ ಬಂಧನ
ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿದ 6 ದಿನದ ಬಳಿಕವೂ ಕೆಲವು ಅದೃಷ್ಟಶಾಲಿಗಳನ್ನು ಜೀವಂತವಾಗಿ ರಕ್ಷಿಸಿದ ಘಟನೆ ವರದಿಯಾಗುತ್ತಿರುವಂತೆಯೇ, ಭೂಕಂಪದಿಂದ ನೆಲಸಮಗೊಂಡಿರುವ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಸುಮಾರು 130 ಜನರನ್ನು ಬಂಧಿಸಿರುವುದಾಗಿ ಟರ್ಕಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡೂ ದೇಶಗಳಲ್ಲಿ ಮೃತರ ಮತ್ತು ಗಾಯಗೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಮಧ್ಯೆಯೇ, ಭೂಕಂಪ ವಲಯದಲ್ಲಿರುವ ಜನರನ್ನು ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸದ ತಪ್ಪು ಯಾರದ್ದು ಎಂಬ ಬಗ್ಗೆ ವಾದವಿವಾದ ಆರಂಭಗೊಂಡಿದೆ. ಟರ್ಕಿಯ ಕಟ್ಟಡಗಳನ್ನು ಈಗಿನ ಭೂಕಂಪ-ಇಂಜಿನಿಯರಿಂಗ್ ಮಾನದಂಡಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಿದ್ದರೂ, ಈ ಮಾನದಂಡಗಳನ್ನು ಸೂಕ್ತವಾಗಿ ಜಾರಿಗೊಳಿಸಿಲ್ಲ. ಆದ್ದರಿಂದಲೇ ಲಕ್ಷಾಂತರ ಕಟ್ಟಡಗಳು ಕ್ಷಣಮಾತ್ರದಲ್ಲಿ ನೆಲಸಮಗೊಂಡಿವೆ ಎಂದು ವರದಿಯಾಗಿದೆ. ಕುಸಿದುಬಿದ್ದ ಕಟ್ಟಡ ಹಾಗೂ ಆಗಿರುವ ಹಾನಿಗೆ ಹೊಣೆಗಾರರು ಎಂದು ಶಂಕಿಸಲಾದ 131 ಜನರನ್ನು ಬಂಧಿಸಲು ವಾರಾಂಟ್ ಜಾರಿಯಾಗಿದೆ ಎಂದು ಟರ್ಕಿಯ ಉಪಾಧ್ಯಕ್ಷ ಫುವಾತ್ ಒಕ್ತಾಯ್ ಹೇಳಿದ್ದಾರೆ.
ಕಟ್ಟಡದ ನಿರ್ಮಾಣದಲ್ಲಿ ಬಳಸಿರುವ ವಸ್ತುಗಳ ಬಗ್ಗೆ ಪುರಾವೆಗಾಗಿ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗುತ್ತಿದೆ. ಕರ್ತವ್ಯಲೋಪ ಸಾಬೀತಾದರೆ ಯಾರನ್ನೂ ಸುಮ್ಮನೆ ಬಿಡಲಾಗದು. ಭೂಕಂಪ ಅತ್ಯಂತ ತೀವ್ರವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಸಂತ್ರಸ್ತರು, ತಜ್ಞರು ಹಾಗೂ ಟರ್ಕಿಯಾದ್ಯಂತದ ಜನರು ವಿನಾಶದ ಪ್ರಮಾಣ ಹೆಚ್ಚಲು ಕೆಟ್ಟ ನಿರ್ಮಾಣ ಕಾಮಗಾರಿಯೂ ಕಾರಣವೆಂದು ದೂಷಿಸುತ್ತಿದ್ದಾರೆ ಎಂದು ಟರ್ಕಿ ಸರಕಾರ ಹೇಳಿದೆ.