ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಮುಖಂಡರ ಸಭೆ: ಸಮುದಾಯಕ್ಕೆ 65 ಟಿಕೆಟ್ ನೀಡುವಂತೆ ಪಟ್ಟು

ಬೆಂಗಳೂರು, ಫೆ.13: ಮುಂಬರುವ 2023ನೇ ವಿಧಾನಸಭಾ ಚುನಾವಣೆ ಹಿನ್ನೆಲೆ, ವೀರಶೈವ ಲಿಂಗಾಯತ ಸಮುದಾಯಕ್ಕೆ 65 ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಒತ್ತಾಯಿಸಲಾಯಿತು.
ಸೋಮವಾರ ನಗರದ ಬಸವ ಸಮಿತಿಯ ಸಭಾಂಗಣದಲ್ಲಿ ಸಮುದಾಯದ ನಾಯಕರು ಮತ್ತು ಮುಖಂಡರ ಸಭೆ ನಡೆಸಿದ್ದು, ಸಮುದಾಯದಲ್ಲಿ ಒಟ್ಟು 210 ಟಿಕೆಟ್ ಆಕಾಂಕ್ಷಿಗಳಿದ್ದು, ಅದರಲ್ಲಿ ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಗೆಲ್ಲುವ ಪ್ರಬಲ ಸಾಧ್ಯತೆ ಇರುವ ಆಕಾಂಕ್ಷಿಗಳಿಗೆ ಪಕ್ಷ ಒತ್ತು ನೀಡಬೇಕೆಂದು ಚರ್ಚಿಸಲಾಯಿತು.
ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲಿಂಗಾಯತ, ವೀರಶೈವದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿಕೊಂಡು ಮುನ್ನೆಡೆಯಬೇಕು. ಎಲ್ಲಾ ಒಳಪಂಗಡಗಳನ್ನೂ ಸೇರಿಸಿ ಕಾಂಗ್ರೆಸ್ ಪಕ್ಷವನ್ನು ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕು. ಪಕ್ಷದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಲ್ಲಾ ಲಿಂಗಾಯತ, ವೀರಶೈವ ಹಿರಿಯ ಮುಖಂಡರು ಶೀಘ್ರದಲ್ಲೇ ಪಟ್ಟಿ ತಯಾರಿಸಿ ಹೈಕಮಾಂಡ್ ಹಾಗೂ ಉಸ್ತುವಾರಿಗಳ ಗಮನ ಸೆಳೆಯುವ ಕುರಿತು ಚರ್ಚೆ ನಡೆಲಾಯಿತು. ಎಐಸಿಸಿ ಮಟ್ಟದಲ್ಲೂ ಸಹ ಸಮುದಾಯದ ನಾಯಕರಿಗೆ ಉತ್ತಮ ಸ್ಥಾನಮಾನಗಳನ್ನು ನೀಡುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಅಲ್ಲಂ ವೀರಭದ್ರಪ್ಪ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಬಿ ಆರ್ ಪಾಟೀಲ್, ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ವಿವಿಧ ಭಾಗಗಳ ಟಿಕೆಟ್ ಆಕಾಂಕ್ಷಿಗಳು ಉಪಸ್ಥಿತರಿದ್ದರು.








