ಸುವೇಂದು ಅಧಿಕಾರಿ ಸದನದಿಂದ ಅಮಾನತುಗೊಳ್ಳುವುದನ್ನು ರಕ್ಷಿಸಿದ ಮಮತಾ ಬ್ಯಾನರ್ಜಿ: ವ್ಯಾಪಕ ಚರ್ಚೆ

ಕೋಲ್ಕತ್ತಾ: ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಸದನದಿಂದ ಅಮಾನತುಗೊಳಿಸಲು ಮುಂದಾಗಿದ್ದ ಸ್ಪೀಕರ್ ಕ್ರಮವನ್ನು ತಡೆ ಹಿಡಿದು, ಅವರ ಪರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪೀಕರ್ ಕ್ಷಮೆ ಯಾಚಿಸಿದ ಘಟನೆ ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಡೆದಿದೆ. ಸ್ಪೀಕರ್ ವಿರುದ್ಧ ಸುವೇಂದು ಅಧಿಕಾರಿ ಬಳಸಿದ ಆಕ್ಷಪಾರ್ಹ ಮಾತಿಗೆ ಪ್ರತಿಯಾಗಿ ಸ್ಪೀಕರ್ ಕ್ಷಮೆ ಕೋರಿದ ಅವರು, ಒಂದು ಕಾಲದ ತಮ್ಮ ನಿಕಟವರ್ತಿಯಾಗಿದ್ದು, ಈಗ ರಾಜಕೀಯ ಪ್ರತಿಸ್ಪರ್ಧಿಯಾಗಿ ಬದಲಾಗಿರುವ ಸುವೇಂದ್ರ ಅಧಿಕಾರಿಯನ್ನು ಸದನದಿಂದ ಅಮಾನತುಗೊಳಿಸುವ ಶಿಕ್ಷೆಯಿಂದ ಪಾರು ಮಾಡಿದ ನಡವಳಿಕೆಯು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ಸಂದರ್ಭದಲ್ಲಿ ಅವರು ಸುವೇಂದು ಅಧಿಕಾರಿಯ ವಿರುದ್ಧ ಯಾವುದೇ ಕಠಿಣ ಟೀಕಾ ಪ್ರಹಾರ ನಡೆಸಲಿಲ್ಲ.
"ವಿರೋಧ ಪಕ್ಷದ ನಾಯಕನ ನಡವಳಿಕೆಯು ಎಷ್ಟು ನಾಚಿಕೆಗೇಡಾಗಿದೆ? ಇದನ್ನೇ ಅವರು ಯಾವಾಗಲೂ ಮಾಡುವುದು. ಅವರು ಇಂತಹ ಭಾಷೆಯನ್ನು ಎಲ್ಲ ಕಡೆಯೂ ಬಳಸುತ್ತಾರೆ. ನಮ್ಮ ವಿರುದ್ಧ ಕೂಡಾ. ಅವರ ಪರವಾಗಿ ನಾನು ಕ್ಷಮಾಪಣೆ ಕೋರುತ್ತೇನೆ. ದಯವಿಟ್ಟು ಆತನನ್ನು ಕ್ಷಮಿಸಿ, ಅವರನ್ನು ಕ್ಷಮಿಸಿ" ಎಂದು ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದರು.
ಸುವೇಂದು ಅಧಿಕಾರಿ ಅವರು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ದ ಮಾಡಿದ ನಿಧಿ ದುರ್ಬಳಕೆ, ಆರೋಪವು ಕಡತದಲ್ಲಿ ದಾಖಲಾಗದಂತೆ ಸ್ಪೀಕರ್ ಬಿಮನ್ ಬ್ಯಾನರ್ಜಿ ತಡೆ ಹಿಡಿದರು. ಇದರಿಂದ ತಮ್ಮ ತಾಳ್ಮೆ ಕಳೆದುಕೊಂಡ ಸುವೇಂದು ಅಧಿಕಾರಿ, ಬಿಜೆಪಿ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು.
ಈ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಆಡಿದ ಮಾತು ಬಿಜೆಪಿ ಶಾಸಕರ ಗದ್ದಲದ ನಡುವೆ ಸಮರ್ಪಕವಾಗಿ ಕೇಳಿಸದಿದ್ದರೂ, ಸ್ಪೀಕರ್ ಕಾರ್ಯವೈಖರಿ ವಿರುದ್ಧದ ಟೀಕೆಯು ಹಕ್ಕು ಚ್ಯುತಿ ನಿರ್ಣಯವನ್ನು ಆಹ್ವಾನಿಸುತ್ತದೆ ಎಂದು ಬಿಮನ್ ಬ್ಯಾನರ್ಜಿ ಎಚ್ಚರಿಸಿದರು. "ನಾನು ವಿರೋಧ ಪಕ್ಷದ ನಾಯಕನ ವಿರುದ್ಧ ಹಕ್ಕು ಚ್ಯುತಿ ಮಂಡಿಸುವ ಹಕ್ಕನ್ನು ಕಾಯ್ದಿರಿಸಿದ್ದೇನೆ" ಎಂದೂ ಅವರು ಹೇಳಿದರು.
ಸಭಾತ್ಯಾಗದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದನವನ್ನುದ್ದೇಶಿಸಿ ಮಾತನಾಡಿದರು. ನಂತರ ಉಪ ಮುಖ್ಯ ಸಚೇತಕ ತಪಸ್ ರಾಯ್, ಸುವೇಂದು ಅಧಿಕಾರಿಯನ್ನು ಫೆ. 20ರವರೆಗೆ ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು. ಆಗ ಸ್ಪೀಕರ್ ಅವರು ಮಮತಾ ಬ್ಯಾನರ್ಜಿಯವರ ಕ್ಷಮಾಪಣಾ ಮನವಿಯನ್ನು ಗಮನಕ್ಕೆ ತಂದರು.
ಈ ಕುರಿತು ಸುವೇಂದು ಅಧಿಕಾರಿಯನ್ನು ಸುದ್ದಿಗಾರರು ಪ್ರಶ್ನಿಸಿದಾಗ, "ಅವರಿಗೆ ಒಳ್ಳೆ ಪ್ರಜ್ಞೆ ಮೂಡುವಂತಾಗಲಿ. ನನ್ನ ಮಾತು ಕೇಳಿ. ಅವರು ಕೇಳಿಸಿಕೊಂಡರೆ ಅದರಿಂದ ಬಂಗಾಳಕ್ಕೆ ನಷ್ಟವೇನೂ ಆಗುವುದಿಲ್ಲ, ಬದಲಿಗೆ ಲಾಭವೇ ಆಗಲಿದೆ" ಎಂದು ಉತ್ತರಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಈ ಅಚ್ಚರಿಯ ನಡೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ತಮ್ಮ ಹಿಂದಿನ ನಿಕಟವರ್ತಿ ಸುವೇಂದು ಅಧಿಕಾರಿ ವಿರುದ್ಧ ಮೃದು ಧೋರಣೆ ತಳೆದಿರುವ ಮಮತಾ ಬ್ಯಾನರ್ಜಿ, ಅವರನ್ನು ಮತ್ತೆ ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದೆ.







