ಸರಕಾರ ಒಟ್ಟು ವೆಚ್ಚದ 8 ಶೇ. ಹಣ ಆರೋಗ್ಯಕ್ಕೆ ಮೀಸಲಿಡಲಿದೆಯೇ?

ಕರ್ನಾಟಕ ರಾಜ್ಯ ಸರಕಾರದ ನಾಲ್ಕು ವರ್ಷಗಳ ಆಡಳಿತದ ಬಜೆಟ್ ಆಧಾರಿತ ಪರಾಮರ್ಶೆಯನ್ನು ಬೆಂಗಳೂರಿನ Bangalore Academic Group ಸಂಘಟಿಸಿದ್ದು, ವಿವಿಧ ಕ್ಷೇತ್ರಗಳ ಪರಿಣಿತರ ಸರಣಿ ಪರಾಮರ್ಶೆ ಇಲ್ಲಿದೆ.

2022-23ನೇ ಸಾಲಿನಲ್ಲಿ, ಕರ್ನಾಟಕದ ಬಜೆಟ್‌ನ ಒಟ್ಟು ವೆಚ್ಚಗಳಲ್ಲಿ ಶೇ. 5.8 ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿತ್ತು. ಇಂತಹದೊಂದು ಹೇಳಿಕೆ ಕೊಟ್ಟುಬಿಟ್ಟರೆ, ‘‘ಅಬ್ಬಾ ಪರ್ವಾಯಿಲ್ವೇ!’’ ಎಂದುಬಿಡುತ್ತಾರೆ. ಹಾಗಾಗಿ, ಅದರೊಂದಿಗೆ ಇನ್ನೊಂದು ವಾಕ್ಯವನ್ನು ಸೇರಿಸಬೇಕು. ಅದೇನೆಂದರೆ ದೇಶದ ಉಳಿದ ರಾಜ್ಯಗಳ ಬಜೆಟ್‌ನಲ್ಲಿ, ಸರಾಸರಿ ಆರೋಗ್ಯ ಕ್ಷೇತ್ರದ ವೆಚ್ಚ ಶೇ. 6. ಅಂದರೆ, ದೇಶದ ಮುಂದುವರಿದ ರಾಜ್ಯಗಳಲ್ಲಿ ಒಂದೆಂದು ಹೇಳಿಕೊಳ್ಳುವ ಕರ್ನಾಟಕದ ಆರೋಗ್ಯ ವೆಚ್ಚ ದೇಶದ ಸರಾಸರಿಗಿಂತ ಕಡಿಮೆ ಇದೆ. ಅಯ್ಯೋಪಾಪ, ಈ ವರ್ಷ ಏನೋ ಪರಮೋಷಿ ಆಗಿ ಹೋಯಿತು. ಹಿಂದೆ ಹೀಗಿರಲಿಲ್ಲ ಅಂತೀರಾ? ಕರ್ನಾಟಕದ ಆರೋಗ್ಯ ಬಜೆಟ್ ವೆಚ್ಚ 2017-18ರಲ್ಲಿ ಒಟ್ಟು ಬಜೆಟ್ ವೆಚ್ಚದ ಶೇ. 4.3ರಷ್ಟು ಇತ್ತು, 2019-20 ರಲ್ಲಿ 4.4ರಷ್ಟು ಇತ್ತು, 2020-21ರಲ್ಲಿ ಶೇ. 4.6ರಷ್ಟು ಇತ್ತು ಮತ್ತು 2021-22ರಲ್ಲಿ ಶೇ. 5.3ರಷ್ಟು ಇತ್ತು. ಈ ಐದೂ ವರ್ಷಗಳಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ನಲ್ಲಿ ಹಂಚಿಕೆ ಆದ ಪ್ರಮಾಣವು ದೇಶದ ಬೇರೆ ರಾಜ್ಯಗಳು ಆರೋಗ್ಯಕ್ಕೆ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ ಕಡಿಮೆ ಇತ್ತು.
ಸುಮಾರು 7.2 ಕೋಟಿ ಜನಸಂಖ್ಯೆ ಇರುವ ಕರ್ನಾಟಕವು, ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು. ಇಲ್ಲಿನ ಶೇ. 60 ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ನಗರೀಕರಣ ವೇಗ ಪಡೆಯುತ್ತಿದ್ದು, ರಾಜ್ಯದ ಮೂರನೇ ಒಂದು ಭಾಗ ಈಗ ನಗರೀಕರಣಗೊಂಡಿದೆ. ಇನ್ನೊಂದೆಡೆ, ರಾಜ್ಯದ ಜನಸಂಖ್ಯೆಯಲ್ಲಿ ಶೇ. 21 ಜನಸಮುದಾಯ ಬಡತನದ ರೇಖೆಗಿಂತ ಕೆಳಗಿದ್ದರೆ, ಶೇ. 45 ಜನರ ವಾರ್ಷಿಕ ತಲಾ ಆದಾಯ 1.43 ಲಕ್ಷ ರೂ.ಕ್ಕಿಂತ ಕಡಿಮೆ ಇದೆ. (2018ರ ಲೆಕ್ಕಾಚಾರ). ರಾಜ್ಯದ ಜಿಲ್ಲೆಗಳಲ್ಲಿ ಆರೋಗ್ಯ, ಆರ್ಥಿಕ, ಶಿಕ್ಷಣ ಕ್ಷೇತ್ರಗಳ ಮೂಲಸೌಕರ್ಯಗಳ ಬೆಳವಣಿಗೆಯಲ್ಲಿ ಅಸಮಾನತೆ ತೀರಾ ದೊಡ್ಡ ಗಾತ್ರದಲ್ಲಿದೆ; ಆ ಕಾರಣಕ್ಕಾಗಿ ಜೀವನ ಗುಣಮಟ್ಟಗಳೂ ಅದೇ ಪ್ರಮಾಣದಲ್ಲಿ ಅಸಮಾನವಾಗಿ ಉಳಿದಿವೆ.
ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ, ರಾಜ್ಯದಲ್ಲಿ ಈಗ 5,917 ವೆಲ್‌ನೆಸ್ ಸೆಂಟರ್‌ಗಳು, 8,871 ಉಪಕೇಂದ್ರಗಳು, 2,299 ಪಿಎಚ್‌ಸಿಗಳು, 207 ಸಿಎಚ್‌ಸಿಗಳು, 146 ತಾಲೂಕು ಆಸ್ಪತ್ರೆಗಳು ಮತ್ತು 17 ಜಿಲ್ಲಾಸ್ಪತ್ರೆಗಳು ಕಾರ್ಯಾಚರಿಸುತ್ತಿವೆ. ಇಲ್ಲಿ 60 ವೈದ್ಯಕೀಯ ಕಾಲೇಜುಗಳಿದ್ದು, ಜಿಲ್ಲೆಗೆ ಸರಾಸರಿ ಎರಡರಂತಿವೆಯಾದರೂ, ಅವುಗಳಲ್ಲಿ 14 ಬೆಂಗಳೂರು ನಗರದಲ್ಲೂ, 9 ಕರಾವಳಿಯಲ್ಲೂ ಕೇಂದ್ರೀಕೃತವಾಗಿವೆ; ಹೆಚ್ಚಿನವು ಖಾಸಗಿ ವಲಯದವು. ಎನ್‌ಎಚ್‌ಎಫ್‌ಎಸ್ ಅಂಕಿಸಂಖ್ಯೆಗಳ ಪ್ರಕಾರ, ರಾಜ್ಯದಲ್ಲಿ ಆರೋಗ್ಯ ಆರೈಕೆ ಶೇ. 70-80ರಷ್ಟು ಖಾಸಗಿಯವರ ಕೈಯಲ್ಲಿದೆ. ಸರಕಾರದ ಮಾನದಂಡಗಳ ಅನ್ವಯವೇ ಮಂಜೂರಾದ ಮತ್ತು ಲಭ್ಯವಿರುವ ಹುದ್ದೆಗಳ ನಡುವೆ ದೊಡ್ಡ ಕಂದರ ಇದೆ; ಒಟ್ಟಿನಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ, ಬಳಕೆ ಮತ್ತು ಕೈಗೆಟುಕುವಿಕೆಗಳಲ್ಲಿ ನಗರ ಮತ್ತು ಗ್ರಾಮಗಳ ನಡುವೆ, ಜಿಲ್ಲೆ ಜಿಲ್ಲೆಗಳ ನಡುವೆ ತಾರತಮ್ಯಗಳಿವೆ.
ಸುಧಾರಣೆಯಲ್ಲಿ ಕಳಪೆ ಸಾಧನೆ
ಭಾರತದ ನೀತಿ ಆಯೋಗ ಸಿದ್ಧಪಡಿಸಿದ 2019-20ನೇ ಸಾಲಿನ ನ್ಯಾಷನಲ್ ಹೆಲ್ತ್ ಇಂಡೆಕ್ಸ್‌ನಲ್ಲಿ, ದೇಶದ ಒಳ್ಳೆಯ ಆರೋಗ್ಯ ಮೂಲಸೌಕರ್ಯಗಳಿರುವ ರಾಜ್ಯಗಳಲ್ಲಿ ಒಂಭತ್ತನೇ ಸ್ಥಾನದಲ್ಲಿರುವ ಕರ್ನಾಟಕ, ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಅತ್ಯಂತ ಕೆಳಗಿನ ಅಂದರೆ ಹತ್ತೊಂಬತ್ತನೇ ಸ್ಥಾನದಲ್ಲಿದೆ. 24 ಅಂಶಗಳನ್ನು ಆಧರಿಸಿ ನೀಡಲಾಗಿರುವ ಈ ಅಂಕಗಳಲ್ಲಿ ಕರ್ನಾಟಕ ಮೈನಸ್ 1.37 ಅಂಕಗಳನ್ನು ಗಳಿಸಿದೆ.
ರಾಷ್ಟ್ರಮಟ್ಟದಲ್ಲೇ ಸಾರ್ವಜನಿಕ ಆರೋಗ್ಯ ವೆಚ್ಚ ದೇಶದ ಜಿಡಿಪಿಯ ಕೇವಲ ಶೇ. 1.2ಇದ್ದು, ಅದನ್ನು ಪ್ರಾಥಮಿಕ ಮತ್ತು ಎರಡನೇ ಹಂತದ ಆರೋಗ್ಯ ಆರೈಕೆ ಚಟುವಟಿಕೆಗಳ ಮಟ್ಟಿಗೆ ಶೇ. 2.5ಕ್ಕಾದರೂ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ಸಮಯಗಳಿಂದ ಇದೆ. ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪರ್ ಕ್ಯಾಪಿಟಾ ವೆಚ್ಚ 1,429 ರೂ.ಗಳಷ್ಟೇ ಇವೆ. 2018ರಲ್ಲಿ ಆರಂಭಿಸಿದ ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಈಗ ಬಡತನ ರೇಖೆಗಿಂತ ಕೆಳಗಿರುವ 1.15 ಕೋಟಿ ಜನ ಅದರ ಅನುಕೂಲ ಪಡೆಯಲು ಅರ್ಹತೆ ಹೊಂದಿದ್ದಾರೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಗಳಡಿ ಕರ್ನಾಟಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 4.7 ಇದೆಯಾದರೂ, ಅವರಲ್ಲಿ ಆ ಯೋಜನೆಗಳ ಲಾಭ ಸಿಗುತ್ತಿರುವುದು ಶೇ. 0.8 ಜನರಿಗೆ ಮಾತ್ರ ಎಂದು ಎನ್‌ಎಸ್‌ಎಸ್ ದತ್ತಾಂಶಗಳು ಹೇಳುತ್ತಿವೆ.
ಹೀಗೆ ತೀರಾ ಅಸಮತೋಲನದ ಆರೋಗ್ಯ ವ್ಯವಸ್ಥೆ ಅತ್ತ ನಗರ ಪ್ರದೇಶಗಳಲ್ಲೂ, ಇತ್ತ ಗ್ರಾಮೀಣ ಪ್ರದೇಶಗಳಲ್ಲೂ ಸನ್ನದ್ಧತೆಗೆ ಸಂಬಂಧಿಸಿದಂತೆ ಎಷ್ಟು ಅಸಹಾಯಕ ಸ್ಥಿತಿಯಲ್ಲಿತ್ತು ಎಂಬುದನ್ನು ನಾವು ಕೋವಿಡ್ ಕಾಲದಲ್ಲಿ ನೋಡಿಯಾಗಿದೆ.
ವಾಸ್ತವ ಹೀಗಿರುವಾಗ ಸುಮಾರು ಎರಡು ಲಕ್ಷ ಕೋಟಿ ರೂ. ಗಾತ್ರ ಮಿಕ್ಕುವ ತನ್ನ ವಾರ್ಷಿಕ ಬಜೆಟಿನಲ್ಲಿ ವರ್ಷಕ್ಕೆ ಕೇವಲ 10-12 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ಕ್ಷೇತ್ರಕ್ಕೆ ತೆಗೆದಿರಿಸುತ್ತಿರುವ ರಾಜ್ಯ ಸರಕಾರ, ಅದರಲ್ಲಿ ಬಹುಪಾಲನ್ನು ಸಂಬಳ, ಆಡಳಿತ ಇತ್ಯಾದಿ ವೆಚ್ಚಗಳಿಗೇ ಬಳಸಿದರೆ, ಅಂತಿಮ ಫಲಾನುಭವಿಗೆ ಸಿಗಬೇಕಾದ ಆರೋಗ್ಯ ಭಾಗ್ಯ ಮತ್ತು ಜೀವನ ಗುಣಮಟ್ಟದ ಸುಧಾರಣೆಯ ಪಾಲು ತೀರಾ ಸಣ್ಣದಿರುತ್ತದೆ. ಆ ಕಾರಣಕ್ಕಾಗಿಯೇ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಕಾದಿರಿಸಬೇಕೆಂಬ ಬೇಡಿಕೆಗಳು ಎದ್ದಿರುವುದು.

ಭಾರತದ ನೀತಿ ಆಯೋಗ ಸಿದ್ಧಪಡಿಸಿದ 2019-20ನೇ ಸಾಲಿನ ನ್ಯಾಷನಲ್ ಹೆಲ್ತ್ ಇಂಡೆಕ್ಸ್‌ನಲ್ಲಿ, ದೇಶದ ಒಳ್ಳೆಯ ಆರೋಗ್ಯ ಮೂಲಸೌಕರ್ಯಗಳಿರುವ ರಾಜ್ಯಗಳಲ್ಲಿ ಒಂಭತ್ತನೇ ಸ್ಥಾನದಲ್ಲಿರುವ ಕರ್ನಾಟಕ, ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಅತ್ಯಂತ ಕೆಳಗಿನ ಅಂದರೆ ಹತ್ತೊಂಬತ್ತನೇ ಸ್ಥಾನದಲ್ಲಿದೆ. 24 ಅಂಶಗಳನ್ನು ಆಧರಿಸಿ ನೀಡಲಾಗಿರುವ ಈ ಅಂಕಗಳಲ್ಲಿ ಕರ್ನಾಟಕ ಮೈನಸ್ 1.37 ಅಂಕಗಳನ್ನು ಗಳಿಸಿದೆ.
ವಿಷನ್ ಡಾಕ್ಯುಮೆಂಟ್
2021ರ ಕೊನೆಯಲ್ಲಿ, ಕರ್ನಾಟಕ ಸರಕಾರವು ಕೋವಿಡ್ ಅನುಭವಗಳ ಹಿನ್ನೆಲೆಯಲ್ಲಿ ರಾಜ್ಯಕ್ಕೊಂದು ವಿಷನ್ ಡಾಕ್ಯುಮೆಂಟನ್ನು ಸಿದ್ಧಪಡಿಸಿತ್ತು. ಅದರಲ್ಲಿ 2030ರ ಹೊತ್ತಿಗೆ ರಾಜ್ಯ ಸರಕಾರ ತಲುಪಬೇಕಾಗಿರುವ ಗುರಿಗಳನ್ನು ನಿಗದಿ ಮಾಡಲಾಗಿದೆ. ಅದು ಹೇಳಿದ ಈ ಕೆಳಗಿನ ಆರ್ಥಿಕ ಗುರಿಗಳನ್ನು ಈ ಬಾರಿಯ ಬಜೆಟ್ ಯಾವ ಮಟ್ಟದಲ್ಲಿ ಅಳವಡಿಸಿಕೊಳ್ಳಲಿದೆ ಎಂಬುದನ್ನು ಗಮನಿಸಬೇಕಿದೆ. ಅದರ ಪ್ರಕಾರ:
ರಾಜ್ಯ ಸರಕಾರ, 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಸರಿಸುವ ಮನಸ್ಸು ಮಾಡಿದರೆ, 2025ರ ಹೊತ್ತಿಗೆ, ರಾಜ್ಯದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ. 8ರಷ್ಟು ಹಣವನ್ನು ಮೀಸಲಿಡಬೇಕಾಗಿದೆ.
ಬೇರೆ ಬೇರೆ ಇಲಾಖೆಗಳು ಮತ್ತು ಯೋಜನೆಗಳಲ್ಲಿ ಆರೋಗ್ಯಕ್ಕೆಂದು ಬರುವ ಹಣವನ್ನು ಒಂದು ಕೇಂದ್ರೀಕೃತ ಯೋಜನೆಯ ಮೂಲಕ ಸರಳವಾಗಿ, ಅನುಕೂಲಕರ ಹಾದಿಯಲ್ಲಿ ಜನರಿಗೆ ತಲುಪಿಸಬೇಕು.
ರಾಜ್ಯ ಮಟ್ಟದ ವಿಕೇಂದ್ರೀಕೃತ ಟೆಂಡರ್ ವ್ಯವಸ್ಥೆಯ ಮೂಲಕ ಬಳಕೆದಾರರಿಗೆ ಕಿಸೆಯಿಂದ ಬೀಳುವ ವೈದ್ಯಕೀಯ ವೆಚ್ಚಗಳು ಕಡಿಮೆಯಾಗುವಂತೆ ನೋಡಿಕೊಳ್ಳುವುದು.
ಜನ ಔಷಧಿ ಕೇಂದ್ರಗಳ ವ್ಯಾಪ್ತಿಯನ್ನು ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಮಟ್ಟದಲ್ಲಿ ವಿಸ್ತರಿಸುವುದು.
ಸಿಎಸ್‌ಆರ್ ಕಾರ್ಯಕ್ರಮಗಳಡಿ ಖಾಸಗಿ ರಂಗದವರು ಆಯ್ದ ಕೆಲವು ರಂಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು.
ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಬೇಕಾಗುವ ಆಡಳಿತಾತ್ಮಕ ಶಕ್ತಿ ಪೋಲನ್ನು ತಗ್ಗಿಸಲು ಮತ್ತು ಪಾರದರ್ಶಕತೆ ಹೆಚ್ಚಿಸಲು ವೈದ್ಯಕೀಯ ಆಡಳಿತವ್ಯವಸ್ಥೆಯನ್ನು ಬಲಪಡಿಸುವುದು.
ಸ್ವತಃ ಸರಕಾರವೇ ರಚಿಸಿದ 250ಮಂದಿ ವೈದ್ಯಕೀಯ ಪರಿಣತರ ಸಮಿತಿಯೊಂದು ಕೊಟ್ಟಿರುವ ಈ ವರದಿಯನ್ನು ದೇಶದಲ್ಲೇ ಇಂತಹದೊಂದು ವರದಿ ಮೊದಲೆಂದು ಹೇಳಿ ಮಾರ್ಕೆಟಿಂಗ್ ಮಾಡಿಕೊಂಡಿರುವ ರಾಜ್ಯ ಸರಕಾರ, ತಾನು ನೇಮಿಸಿರುವ ಈ ಸಮಿತಿಯ ಶಿಫಾರಸುಗಳಲ್ಲಿ ಆರೋಗ್ಯ ಕ್ಷೇತ್ರದ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದ ನ್ನೆಲ್ಲ ಅಳವಡಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡೋಣ.







