ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಿ.ನಫೀಸಾ ಫರೀದ್ ಸ್ಮಾರಕ ದತ್ತಿ ಉಪನ್ಯಾಸ

ಕೊಣಾಜೆ, ಫೆ.14: ಯು.ಟಿ ಫರೀದ್ ಫೌಂಡೇಶನ್ ಹಾಗೂ ಕಣಚೂರು ಫಿಸಿಯೋಥೆರಪಿ ಇದರ ಸಂಯುಕ್ತ ಆಶ್ರಯದಲ್ಲಿ ದಿ.ನಫೀಸಾ ಫರೀದ್ ಸ್ಮಾರಕ ಎರಡು ದಿನಗಳ ದತ್ತಿ ಉಪನ್ಯಾಸವು ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಡಾ.ಮುಹಮ್ಮದ್ ಇಸ್ಮಾಯೀಲ್ ಹೆಜಮಾಡಿ ಮಾತನಾಡಿ, ಫಿಸಿಯೋಥೆರಪಿ ಕ್ಷೇತ್ರದಲ್ಲಿ ಆರಂಭಿಕ ಸಜ್ಜುಗೊಳಿಸುವಿಕೆ ಬಹುಮುಖ್ಯ ವಿಚಾರವಾಗಿದೆ. ಕ್ಷೇತ್ರದಲ್ಲಿ ಸೋಮಾರಿಯಾಗದೆ ಮನಸ್ಸು ಕೌಶಲ್ಯವನ್ನು ವೃದ್ಧಿಸುವಂತ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿರಿ ಎಂದರು.
ದೈಹಿಕ, ಮಾನಸಿಕ, ಸಾಮಾಜಿಕ ಅಂಶಗಳ ಪುನರ್ ಸ್ಥಾಪನೆಯಲ್ಲಿ ಫಿಸಿಯೋಥೆರಪಿ ಪ್ರಮುಖ ಭಾಗವಾಗಿದೆ. ರೋಗಿಗಳನ್ನು ಐಸಿಯುವರೆಗೆ ಕೊಂಡೊಯ್ಯದಂತೆ ನೋಡುವುದೇ ಆರಂಭಿಕ ಸಜ್ಜುಗೊಳಿಸುವಿಕೆ ಚಿಕಿತ್ಸಾ ವಿಧಾನ. ಈ ನಿಟ್ಟಿನಲ್ಲಿ ಫಿಸಿಯೋಥೆರಪಿ ಕ್ಷೇತ್ರ ಅಗಾಧವಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಯು.ಕೆ.ಮೋನು ಮಾತನಾಡಿ, ಫಿಸಿಯೋಥೆರಪಿ ಎಂಬುದು ಔಷಧವಿಲ್ಲದ ಆರೋಗ್ಯ ಸೇವೆ. ಪ್ರಪಂಚದಾದ್ಯಂತ ಫಿಸಿಯೋಥೆರಪಿಗಳಿಗೆ ವಿಪುಲ ಅವಕಾಶಗಳಿದ್ದು, ಉತ್ತಮ ತರಬೇತಿಯ ಜೊತೆಗೆ ಉತ್ತಮ ಸೇವೆಯನ್ನು ಒದಗಿಸುವವರಾಗಿ ಎಂದು ಕರೆ ನೀಡಿದರು.
ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಾರ್ಯಾಗಾರಗಳಲ್ಲಿ ತೊಡಗಿಸುವ ಮುನ್ನ ಪೂರ್ವತಯಾರಿ ಅಗತ್ಯ, ಕಾರ್ಯಗಾರಗಳಿಂದ ಜ್ಞಾನವೃದ್ಧಿ ಸಾಧ್ಯ. ಇದು ವೃತ್ತಿಜೀವನಕ್ಕೆ ಸಹಕಾರಿ ಎಂದರು.
ಫಿಸಿಯೋಥೆರಪಿ ಬೋರ್ಡ್ ಆಫ್ ಸ್ಟಡೀಸ್‍ನ ಅಧ್ಯಕ್ಷೆ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಶೈಕ್ಷಣಿಕ ಸಮಿತಿ ಸದಸ್ಯೆ ಡಾ.ವೈಶಾಲಿ ದಿಕ್ಸೂಚಿ ಭಾಷಣ ಮಾಡಿದರು.
ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸಯನ್ಸ್‍ನ ಡೀನ್ ಡಾ.ಮುಹಮ್ಮದ್ ಸುಹೈಲ್ ಸ್ವಾಗತಿಸಿದರು. ಯು.ಟಿ.ಫರೀದ್ ಫೌಂಡೇಶನ್ ಅಧ್ಯಕ್ಷ ಹಾಗೂ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಪಿಯ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ವಂದಿಸಿದರು.
ತಾಯಿ ನಿಧನದ ದಿನದಂದೇ 20 ವರ್ಷಗಳ ಹಿಂದೆ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಲು ಅಸಾಧ್ಯವಾಯಿತು. ತಾಯಿ ಸ್ಮರಣಾರ್ಥ ಪ್ರತಿವರ್ಷ ಕಣಚೂರು ಸಂಸ್ಥೆ ಗೌರವಪೂರಕವಾಗಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಭಾರಿ. ಮುಂದಿನ ವರ್ಷ ಹೊಸ ಸರಕಾರದ ಆರೋಗ್ಯ ಸಚಿವಾಲಯದ ಜೊತೆಗೂಡಿ ತಾಯಿಯ ಸ್ಮರಣಾರ್ಥ ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆಯಿದೆ.
-ಡಾ.ಯು.ಟಿ.ಇಫ್ತಿಕಾರ್ ಅಲಿ
ಅಧ್ಯಕ್ಷರು, ಯು.ಟಿ.ಫರೀದ್ ಫೌಂಡೇಶನ್