ಮಂಗಳೂರು ವಿವಿ: ಕನಕ ಕೀರ್ತನ ಗಂಗೋತ್ರಿ ಉದ್ಘಾಟನೆ
ಕವಿ ಕನಕದಾಸರು ಜಾತಿ ಮತ ಕಂದಕವ ಮೀರಿದ ಸಂತ: ಪುತ್ತೂರು ನರಸಿಂಹ ನಾಯಕ್

ಮಂಗಳೂರು: ಕನಕದಾಸರ ಸಾಹಿತ್ಯದ ಶಕ್ಯಿ, ಕಾವ್ಯದ ಶಕ್ತಿ ಅತ್ಯದ್ಭುತವಾದುದು. ಅಂದಿನ ಕಾಲದಲ್ಲೇ ಅವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತೋರಿಸುವುದರ ಜೊತೆಗೆ ಮನಸ್ಸು ಮನಸ್ಸುಗಳನ್ನು ಬೆಸೆಯುವ , ಜಾತಿ, ಮತ ಕಂದಕಗಳನ್ನು ದೂರಗೊಳಿಸುವ ಪ್ರಯತ್ನ ಮಾಡಿದವರು ಕನಕದಾಸರು, ಎಂದು ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಗಾಯನ ಮತ್ತು ಸಮೂಹ ನೃತ್ಯ ಭಜನಾ ಕಾರ್ಯಕ್ರಮವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕನಕದಾಸರ ಪ್ರತಿಯೊಂದು ಕಾವ್ಯದಲ್ಲೂ ಅವರ ಪ್ರಗತಿಪರ ಚಿಂತನೆ ಎದ್ದು ಕಾಣುತ್ತದೆ. ಪ್ರಗತಿಪರ ಚಿಂತನೆಯೊಂಂದಿಗೆ ಸಾಮರಸ್ಯವನ್ನು ತರುವಲ್ಲಿ ಕನಕರು ಕೊಂಡಿಯಾಗುವುದನ್ನು ಗಮನಿಸಲು ಸಾಧ್ಯವಾಗುತ್ತದೆ. ಕನಕದಾಸರ ಹಲವಾರು ಹಾಡುಗಳಲ್ಲಿ ಕಾವ್ಯದ ಅಂಶಗಳ ಜೊತೆಗೆ ಆಧ್ಯಾತ್ಮಕ ಪರಿಕಲ್ಪನೆಗಳಿವೆ. ಅವರ ಹರಿಭಕ್ತಸಾರ ಆಧ್ಯಾತ್ಮ ಲೋಕಕ್ಕೆ ಅಧ್ಬುತವಾದ ಕೊಡುಗೆಯಾಗಿದೆ. ವೈರಾಗ್ಯದ ಹಾಡನ್ನು ಕನಕದಾಸರಷ್ಟು ಹಾಡಿದವರು ಯಾರೂ ಇರಲು ಸಾಧ್ಯವಿಲ್ಲ. ಹಾಗೆಯೇ ಆಸ್ತಿಕರಿಗೆ ಭಗವಂತನನ್ನು ಕಾಣಲು ಕನಕನ ಕಾವ್ಯ ಪ್ರೇರಣಾ ಶಕ್ತಿಯಾಗಿದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರ ತತ್ವ ಚಿಂತನೆಗಳನ್ನು ಯುವ ಸಮುದಾಯತ್ತ ತಲುಪಿಸುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ. ಮಂಗಳೂರು ವಿವಿ ಕನಕದಾಸ ಅಧ್ಯಯನ ಕೇಂದ್ರವು ಕನಕಗಂಗೋತ್ರಿ ಕಾರ್ಯಕ್ರಮದ ಮೂಲಕ ಸಾಮುದಾಯಿಕ ಪಾಲ್ಗೊಳ್ಳುವಿಕೆಗೆ ಅವಕಾಶ ಒದಗಿಸುತ್ತಿದೆ. ಅಲ್ಲದೆ ಕನಕ ಸಮೂಹ ನೃತ್ಯ ಭಜನೆಯನ್ನೂ ಈ ಭಾರಿ ಆಯೋಜಿಸಿರುವುದು ವಿಶೇಷವಾಗಿದೆ ಎಂದರು.
ಮಂಗಳೂರು ವಿವಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಸೋಮಣ್ಣ ಹೊಂಗಳ್ಳಿ, ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಪರಮೇಶ್ವರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕನಕದಾಸ ಸಂಶೋಧನಾ ಕೆಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ಸಹಾಯಕ ಆನಂದ ಕಿದೂರು ವಂದಿಸಿದರು. ಶ್ರೀದೇವಿ ಕೆ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ-ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.200 ಕ್ಕೂ ಅಧಿಕ ಗಾಯಕರು ಭಾಗವಹಿಸಿದ್ದರು.