ಹಿಂದೂ ಬಾಹುಳ್ಯ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಗೆ ಅಂಗಡಿ ನೀಡಲು ಆಕ್ಷೇಪ ಸಲ್ಲಿಸಿ ಅರ್ಜಿ ಹಾಕಿದ ವ್ಯಕ್ತಿಗೆ ದಂಡ

ಅಹಮದಾಬಾದ್: ಗುಜರಾತಿನ ವಡೋದರಾದಲ್ಲಿ ಹಿಂದೂಗಳು ಹೆಚ್ಚಿರುವ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಅಂಗಡಿಯನ್ನು ಮಾರಾಟ ಮಾಡಲು ಅನುಮೋದಿಸಿದ ಆದೇಶವನ್ನು ಹಿಂಪಡೆಯಲು ಕೋರಿದ ಅರ್ಜಿದಾರರಿಗೆ ಗುಜರಾತ್ ಹೈಕೋರ್ಟ್ ಕಳೆದ ವಾರ 25,000 ರೂಪಾಯಿ ದಂಡ ವಿಧಿಸಿದೆ ಎಂದು livelaw.com ವರದಿ ಮಾಡಿದೆ.
2016 ರಲ್ಲಿ ಅಂಗಡಿಯ ಮಾರಾಟಕ್ಕೆ ಸಾಕ್ಷಿಯಾಗಿದ್ದ ಅರ್ಜಿದಾರರು, ಮಾರಾಟ ಒಪ್ಪಂದಗಳಿಗೆ ಸಹಿ ಹಾಕಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಹುಸಂಖ್ಯಾತ ಹಿಂದೂ ಪ್ರದೇಶದಲ್ಲಿನ ಸಮತೋಲನದ ಮೇಲೆ ಪರಿಣಾಮ ಬೀರಬಹುದು ಮತ್ತು ಕಾನೂನು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಈ ಹಿಂದೆ ಮಾರಾಟಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಅಂಗಡಿ ಮಾಲೀಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2020 ರಲ್ಲಿ ಅಂಗಡಿ ಮಾಲಿಕರ ತೀರ್ಪು ನೀಡಿತ್ತು.
ಮುಸ್ಲಿಂ ವ್ಯಕ್ತಿಯ ಅಂಗಡಿಯ ಪಕ್ಕದಲ್ಲಿರುವ ಇತರೆ ಅಂಗಡಿಯವರು ಮುಸ್ಲಿಂ ವ್ಯಕ್ತಿಗೆ ತನ್ನ ಅಂಗಡಿ ನವೀಕರಣ ಮಾಡಲು ಬಿಡಲಿಲ್ಲ , ಹಾಗಾಗಿ, ತಮ್ಮ ಅಂಗಡಿಯನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ. ಅನಂತರ ಅವರು ಎರಡು ಪೊಲೀಸ್ ದೂರುಗಳನ್ನು ಸಲ್ಲಿಸಬೇಕಾಯಿತು ಎಂಬುದನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಗಮನಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ಮುಸ್ಲಿಂ ವ್ಯಕ್ತಿ ಖರೀದಿಸಿದ ಅಂಗಡಿಯ ಪಕ್ಕದಲ್ಲಿ 10 ಅಂಗಡಿ ಮಾಲೀಕರು ಸಿವಿಲ್ ಅರ್ಜಿ ಸಲ್ಲಿಸಿದ್ದರು.
“2022-23 ರಲ್ಲಿ ಸರ್ಕಾರದ ಅಧಿಕಾರಿಗಳು ಸಾಕ್ಷಿಗಳ ಸಾಕ್ಷ್ಯದ ದಾಖಲೆಯನ್ನು ಮರುಪರಿಶೀಲಿಸಿದ್ದಾರೆ, ಇದರಲ್ಲಿ ಅವರು ತಮ್ಮ ಸಹಿಯ ಬಗ್ಗೆ ಆಕ್ಷೇಪ ಎತ್ತುತ್ತಿಲ್ಲ, ಬದಲಾಗಿ ಸಹಿ ಹಾಕಿದ ಸಂಧರ್ಭದ ಬಗ್ಗೆ ವಿವಾದ ಸಲ್ಲಿಸಿದ್ದಾರೆ. ಇದರ ಉದ್ದೇಶವು ಬೇರೆ ರೀತಿಯಲ್ಲಿ ಕಂಡುಬರುತ್ತದೆ" ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಅಂಗಡಿ ಖರೀದಿದಾರರನ್ನು ಬೇಟೆಯಾಡಲಾಗುತ್ತಿದೆ. ಖರೀಸಿದಿದ ಆಸ್ತಿಯನ್ನು ಅನುಭವಿಸುವ ಅವರ ಪ್ರಯತ್ನವನ್ನು ಅರ್ಜಿದಾರರು ವಿಫಲಗೊಳಿಸುತ್ತಿರುವುದು ಗೊಂದಲಕಾರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.







