ಮಾ.10ರ ವರೆಗೆ ‘ಹಜ್‍ಯಾತ್ರೆ’ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು, ಫೆ.14: ಪ್ರಸಕ್ತ ಸಾಲಿನ ಪವಿತ್ರ ಹಜ್‍ಯಾತ್ರೆಗಾಗಿ ಭಾರತೀಯ ಹಜ್ ಸಮಿತಿಯು ಆಸಕ್ತರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ಮಾ.10ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ರಾಜ್ಯ ಹಜ್ ಸಮಿತಿ ತಿಳಿಸಿದೆ.
ಅರ್ಜಿ ಸಲ್ಲಿಸಲು ಮಾನ್ಯತೆ ಹೊಂದಿರುವ ಅಂತರ್‍ರಾಷ್ಟ್ರೀಯ ಪಾಸ್‍ಪೋರ್ಟ್ ಹೊಂದಿರಬೇಕು. ಅಥವಾ ಕನಿಷ್ಠ ಪಾಸ್‍ಪೋರ್ಟ್ ಅವಧಿಯು 2024ರ ಫೆ.3ರ ವರೆಗೆ ಇರಬೇಕು. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗುವುದು ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ತಿಳಿಸಿದ್ದಾರೆ.
ಭಾರತೀಯ ಹಜ್ ಸಮಿತಿಯ ವೆಬ್‍ಸೈಟ್ www.hajcommittee.gov.in ಅಥವಾ ಗೂಗಲ್ ಪ್ಲೇ ಸ್ಟೋರ್‍ನಿಂದ ‘HCOI’ ಮೊಬೈಲ್ ಆಪ್ ಮೂಲಕ ಆನ್‍ಲೈನ್ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಹಜ್ ಸಮಿತಿಯ ವೆಬ್‍ಸೈಟ್‍ನಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ನು ಒದಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯ ಹಜ್ ಸಮಿತಿಯ ಕಚೇರಿಯಲ್ಲಿ ಹಜ್ ಯಾತ್ರೆಯ ಅರ್ಜಿ ಭರ್ತಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರತಿಗಳನ್ನು ಇತ್ತೀಚೆಗೆ ಆಸಕ್ತರಿಗೆ ವಿತರಿಸಲಾಯಿತು. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೆ ರೀತಿಯ ಸಮಸ್ಯೆಗಳಿದ್ದಲ್ಲಿ ಹಜ್ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ 022-2210 7070 ಅಥವಾ ರಾಜ್ಯ ಹಜ್ ಸಮಿತಿಯ ದೂರವಾಣಿ ಸಂಖ್ಯೆ:080-2856 7676 ಅಥವಾ ಇ-ಮೇಲ್ ವಿಳಾಸ info@gmail.com ಗೆ ಸಂಪರ್ಕಿಸಬಹುದು ಎಂದು ಸರ್ಫರಾಝ್ ಖಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







