ಕೊಡೇರಿ ಸರಕಾರಿ ಶಾಲೆಗೆ ಬೆಂಗಳೂರಿನ ಸ್ಕೂಲ್‌ಬೆಲ್ ತಂಡದಿಂದ ಚಿತ್ತಾರ

ಬೈಂದೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆೆಲೆಯಲ್ಲಿ ರಾಜ್ಯದ 75 ಸರಕಾರಿ ಶಾಲೆಗೆ ಮೂಲಸೌಕರ್ಯ ಸಹಿತ ಸುಣ್ಣಬಣ್ಣ ಬಳಿಯುವ ಯೋಜನೆಯನ್ನು ಹಾಕಿಕೊಂಡಿರುವ ಬೆಂಗಳೂರಿನ ಕ್ಯಾಂಪಸ್ ಟು ಕಮ್ಯೂನಿಟಿ ಸಂಸ್ಥೆೆಯ ಸ್ಕೂಲ್‌ಬೆಲ್ ತಂಡದ ಸದಸ್ಯರು ಕಿರಿಮಂಜೇಶ್ವರ ಗ್ರಾಾಮದ ಕೊಡೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಿಗೆ ನಾನಾ ಬಗೆಯ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಿತ್ರಕಲಾವಿದರು, ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳು, ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಸುಮಾರು 50 ಜನರ ತಂಡ ಕೊಡೇರಿ ಶಾಲೆಗೆ ಆಗಮಿಸಿ ಎರಡು ದಿನಗಳ ಕಾಲ ಅಲ್ಲಿಯೇ ವಾಸವಿದ್ದು ಶಾಲೆಯೆ ಎಲ್ಲ ಗೋಡೆಗೆಗಳಿಗೆ, ಕೊಠಡಿಯ ಒಳಭಾಗದಲ್ಲಿ ವಿದ್ಯಾರ್ಥಿಗಳ ಕಲಿಕೆ, ಮನೋ ವಿಕಾಸಕ್ಕೆೆ ಪೂರಕವಾದ ಚಿತ್ರಗಳನ್ನು ಬಿಡಿಸಿದ್ದಾರೆ.
ಸಮುದ್ರದ ಅಲೆಯ ಜತೆಗೆ ಮೀನಿನ ಚಿತ್ತಾರ, ಹಂಪಿಯ ಕಲ್ಲಿನ ರಥ, ಬುಟ್ಟಿಯಲ್ಲಿ ಮೀನಿಟ್ಟುಕೊಂಡು ಮಾರಾಟ ಮಾಡುತ್ತಿರುವ ಮಹಿಳೆ, ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್, ಕಂಬಳದ ದೃಶ್ಯ, ಯಕ್ಷಗಾನ, ಜಾನಪದ ಕಲಾಕೃತಿಗಳು, ಹಸಿರು ಪರಿಸರ ಹೀಗೆ ಹಲವು ಬಗೆಯ ಚಿತ್ರಗಳನ್ನು ಶಾಲೆಯೆ ಹೊರಗೋಡೆಗಳಲ್ಲಿ ಕಲಾವಿದರ ಕೈಚಳಕದಿಂದ ಮೂಡಿಬಂದಿದೆ. ಇನ್ನು ತರಗತಿ ಕೊಠಡಿಯ ಒಳಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ಲೆಕ್ಕಗಳು, ಅಂಕಿ ಸಂಖ್ಯೆೆ, ಮಾನವನ ದೇಹ ರಚನೆ, ನಾನಾ ಬಗೆಯ ಹಣ್ಣುಗಳು, ಸೌರಮಂಡಲ ಹೀಗೆ ಹತ್ತಾರು ಚಿತ್ರಕಲೆಗಳನ್ನು ಕಾಣಬಹುದಾಗಿದೆ.
ಸ್ಕೂಲ್‌ಬೆಲ್ ಯೋಜನಾ ನಿರ್ದೇಶಕ ಮಹೇಶ್ ಕೃಷ್ಣಮೂರ್ತಿ, ಸಂಯೋಜಕ ಸಂದೇಶ್ ಎಸ್., ಸಹ ಸಂಯೋಜಕಿ ಅರ್ಚನಾ ನಾಗ್, ಆರ್ಟ್ ಮ್ಯಾಟರ್‌ಸ್ ಕಾರ್ಯಕ್ರಮ ಸಂಯೋಜಕ ವೈಷ್ಣವಿ, ಶಾರದಾ ಕೆ.ಎಸ್. ಮೊದಲಾದವರ ಮುಂದಾಳತ್ವದಲ್ಲಿ ಶಾಲೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಎರಡು ದಿನಗಳ ಕ್ಯಾಂಪ್ ನಡೆಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಹಳೇ ವಿದ್ಯಾಾರ್ಥಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಊರಿನ ಸಾರ್ವಜನಿಕರು ಸಹಕರಿಸಿದರು.
