ಅತ್ತ ಅಧಿವೇಶನ, ಇತ್ತ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗಳ ಮಹಾಪೂರ!
ಒಂದೇ ದಿನ 12ಕ್ಕೂ ಹೆಚ್ಚು ಸಂಘಟನೆಗಳಿಂದ ಆಕ್ರೋಶದ ಕೂಗು

ಬೆಂಗಳೂರು, ಫೆ. 14: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಅಧಿವೇಶನದಲ್ಲಿ ಸಚಿವರು, ಶಾಸಕರುಗಳ ಮಾತಿನ ಭರಾಟೆ ಜೋರಾಗಿದ್ದರೆ, ಮತ್ತೊಂದೆಡೆ ಫ್ರೀಡಂ ಪಾರ್ಕ್‍ನಲ್ಲಿ 12ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ಮಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಕ್ರೋಶದ ಕೂಗು ಮುಗಿಲು ಮುಟ್ಟಿದೆ.
ಒಳ ಮೀಸಲಾತಿ ಹೋರಾಟ ಸಮಿತಿ, ಗ್ರಂಥಪಾಲಕರು, ಅಕ್ಷರ ದಾಸೋಹ ಬಿಸಿಯೂಟದ ಸಿಬ್ಬಂದಿ, ಗಾಣಿಗ ಮಹಾಸಭಾ, ಸಂಜೀವಿನಿ ನೌಕರರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರು, ಅರಣ್ಯ ಪ್ರೇರಕರು, ಕುಂಬಾರ ಯುವ ಸೈನ್ಯ ಸೇರಿದಂತೆ ಅನೇಕ ಸಂಘಟನೆಗಳು ಮಂಗಳವಾರ ಫ್ರೀಡಂ ಪಾರ್ಕ್ ಮೈದಾನದಲ್ಲಿ ಟಿಕಾಣಿ ಹೂಡಿ ಸರಕಾರಕ್ಕೆ ಧಿಕ್ಕಾರ ಹಾಕಿದವು.
ಗ್ರಾ.ಪಂ. ಗ್ರಂಥಪಾಲಕರು ಕನಿಷ್ಠ ವೇತನ ಜಾರಿ ಹಾಗೂ ಗ್ರಾಚ್ಯುಟಿ ಸೌಲಭ್ಯ ನೀಡುವಂತೆ ಒತ್ತಾಯಿಸಿದರೆ, 6 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ನೀಡಿ ಎಂದು ಸಂಜೀವಿನಿ ನೌಕರರು ಪಟ್ಟು ಹಿಡಿದಿದ್ದಾರೆ. ಇತ್ತ ಬಿಸಿಯೂಟ ನೌಕರರು 1 ಲಕ್ಷ ರೂ.ಹಿಡಿಗಂಟು ನೀಡಿ ಎಂದು ಮನವಿ ಮಾಡಿದರೆ, ಪಂಚಮಸಾಲಿ ಸಮುದಾಯದವರು ಪ್ರವರ್ಗ 2 ‘ಎ’ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರು ತಮ್ಮನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದರೆ, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಗಾಣಿಗ ಮಹಾ ಸಭಾದವರು ಒತ್ತಾಯಿಸಿದ್ದಾರೆ. ಅರಣ್ಯ ಪ್ರೇರಕರು ಬಾಕಿ ಹಣ ಬಿಡುಗಡೆಗೊಳಿಸುಂತೆ ಕೋರಿದರೆ, ನ್ಯಾ. ಸದಾಶಿವ ವರದಿ ಜಾರಿಗೆ ಒಳ ಮೀಸಲಾತಿ ಹೋರಾಟ ಸಮಿತಿ ಬಿಗಿ ಪಟ್ಟು ಹಿಡಿದಿದೆ. ಹೀಗೆ ಹತ್ತೂ ಹಲವು ಸಂಘಟನೆಗಳ ನೂರಾರು ಬೇಡಿಕೆಗಳನ್ನು ಈಡೇರಿಸುವ ಹೊಣೆ ಸರಕಾರದ ಮೇಲಿದ್ದು, ಅದು ಎಷ್ಟರ ಮಟ್ಟಿಗೆ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.






.jpg)
.jpg)

