ಕೆಲ ಸರಕಾರಿ ಅಧಿಕಾರಿಗಳಿಗೆ ಬ್ರಿಟಿಷ್ ಆಡಳಿತದ ಮನಸ್ಥಿತಿ: ಸ್ಪೀಕರ್ ಕಾಗೇರಿ ಆಕ್ರೋಶ

ಬೆಂಗಳೂರು, ಫೆ.14: ಸರಕಾರದ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಮೀನಾಮೇಷ ಎಣಿಸುವಂತಹ ಕೆಲವು ಅಧಿಕಾರಿಗಳು ಬ್ರಿಟಿಷರೆ ಆಗಿದ್ದಾರೆ. ಆ ಕಾಲದ ಮನಸ್ಥಿತಿ ಇನ್ನು ಇಟ್ಟುಕೊಂಡಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ ವಿಷಯ ಪ್ರಸ್ತಾಪಿಸಿ ಶ್ರೀರಂಗಪಟ್ಟಣ ಕ್ಷೇತ್ರದ ಗಾಮನಹಳ್ಳಿ ಹಾಗೂ ಇತರೆ 16 ಹಳ್ಳಿಗಳಿಗೆ 2018-19ರಲ್ಲಿ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಪೈಪ್‍ಲೈನ್ ಅಳವಡಿಸಲು ಅರಣ್ಯ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ, ಇದುವರೆಗೆ ಅನುಮೋದನೆ ನೀಡಿಲ್ಲ ಎಂದರು.
ಈ ಮಧ್ಯಪ್ರವೇಶಿಸಿದ ಸ್ಪೀಕರ್, ಸರಕಾರದ ಪ್ರತಿಯೊಂದು ಯೋಜನೆ, ಕಾರ್ಯಕ್ರಮಕ್ಕೆ ಅರಣ್ಯ ಸಂರಕ್ಷಣಾ ಕಾನೂನು ನೆಪ ಹೇಳುವುದು, ಹಸಿರು ನ್ಯಾಯಾಧೀಕರಣದ ಆದೇಶವಿದೆ ಎಂದು ಹೇಳುತ್ತಾರೆ. ಭವಿಷ್ಯದಲ್ಲಿ ತಮ್ಮ ಸೇವಾ ಅವಧಿಗೆ ತೊಂದರೆಯಾಗಬಹುದು ಎಂದು ವಿಳಂಬ ಮಾಡುತ್ತಾರೆ. ಯೋಜನೆಗಳಿಗೆ ವೆಚ್ಚ ಹೆಚ್ಚುತ್ತಾ ಹೋಗುತ್ತದೆ. ಅದನ್ನು ನೀಡೋದು ಯಾರು? ಎಂದು ಪ್ರಶ್ನಿಸಿದರು.
ಇದು ಕುಡಿಯುವ ನೀರಿನ ಯೋಜನೆ. ಟ್ಯಾಂಕ್ ನಿರ್ಮಿಸಿ ಪೈಪ್‍ಲೈನ್ ಮಾಡಿಕೊಡಲು ಇರುವ ಸಮಸ್ಯೆಯಾದರೂ ಏನು? ನೀವು ಅಧಿಕಾರಿಗಳ ಕಿವಿ ಹಿಂಡದಿದ್ದರೆ, ಎಲ್ಲ ಯೋಜನೆಗಳು ಇದೇ ರೀತಿ ಆಗುತ್ತವೆ ಎಂದು ಸ್ಪೀಕರ್ ಹೇಳಿದರು.
ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಮಾತನಾಡಿ, ಅರಣ್ಯವಾಸಿಗಳಿಗೆ ನೀರು, ರಸ್ತೆ, ವಿದ್ಯುತ್, ಶಾಲೆ ನೀಡಬೇಕು. ಆ ಭಾಗದಲ್ಲಿರುವ ಜನರಿಗೂ ಸೌಲಭ್ಯ ಕೊಡಬೇಕು ಎಂದು ನ್ಯಾಯಾಲಯದ ಆದೇಶ ಇದೆ. ಆದರೂ, ಅಧಿಕಾರಿಗಳು ಮಾತ್ರ ತಮ್ಮನ್ನು ಬದಲಾಯಿಸಿಕೊಳ್ಳುತ್ತಿಲ್ಲ. ಮಾನವೀಯತೆ ದೃಷ್ಟಿಯಿಂದ ಇಂತಹ ಯೋಜನೆಗಳನ್ನು ಮಾಡಬೇಕು ಎಂದರು.
ಈ ವೇಳೆ ಸರಕಾರದ ಪರವಾಗಿ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವ್ಯಾಪ್ತಿ ಗಾಮನಹಳ್ಳಿ ಹಾಗೂ ಇತರೆ 16 ಗ್ರಾಮಗಳಿಗೆ ಪೈಪ್‍ಲೈನ್ ಅಳವಡಿಸಲು ಅರಣ್ಯ ಇಲಾಖೆ ಅನುಮೋದನೆ ನೀಡಿದ್ದು, ಆದಷ್ಟು ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರ ಶ್ರೀಕಂಠಯ್ಯ, ಈಗಾಗಲೇ ಪೈಪ್‍ಲೈನ್ ಆಗಿದೆ. ಒಂದು ಎಕರೆ ಪ್ರದೇಶದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಅವಕಾಶ ಕೊಡುತ್ತಿಲ್ಲ. ಹೀಗಾದರೆ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
.jpg)







