ಎಲೆಚುಕ್ಕೆ ರೋಗ | ಅಡಿಕೆ ಬೆಳೆಗಾರರ ಆತ್ಮಹತ್ಯೆಗೆ ಸರಕಾರ ಕಾರಣವಲ್ಲವೇ?: ಸಿದ್ದರಾಮಯ್ಯ
''ಬೇರೆ ರಾಜ್ಯಗಳಲ್ಲಿ ‘ಅನ್ನಭಾಗ್ಯ’ ಯೋಜನೆ ಏಕೆ ಇಲ್ಲ?"

ಬೆಂಗಳೂರು, ಫೆ. 14: ‘ಎಲೆಚುಕ್ಕೆ ರೋಗ ಬಂದಿರುವುದರಿಂದ 8 ಜನ ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ರಾಜ್ಯ ಸರಕಾರ ಕಾರಣವಲ್ಲವೇ?’ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಅಡಿಕೆಗೆ ಎಲೆಚುಕ್ಕೆ ರೋಗ ಬಂದು ಬಂದಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಡಿಕೆ ಆಮದು ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರಕಾರವೂ 65ಸಾವಿರ ಟನ್ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಕಡಿಮೆ ಬೆಲೆಗೆ ವಿದೇಶದಿಂದ ಅಡಿಕೆ ಆಮದು ಮಾಡಿಕೊಂಡರೆ ನಮ್ಮ ದೇಶದ ಅಡಿಕೆಗೆ ಹೆಚ್ಚು ಬೆಲೆ ಸಿಗಲಿದೆಯೇ ಎಂದು ಕೇಳಿದರು.
ಯಾವುದೇ ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಅಗತ್ಯ ಇಲ್ಲದಿದ್ದರೂ ಬಲವಂತದಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲೇಬೇಕು ಎಂದಿಲ್ಲ. ಬೆಲೆ ಬಿದ್ದುಹೋಗಿ, ಎಲೆಚುಕ್ಕೆ ರೋಗ ಬಂದಿರುವುದರಿಂದ 8 ಜನ ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದಕ್ಕೆ ಸರಕಾರ ಕಾರಣವಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಮಾತನಾಡುವಾಗ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರೂ ಅಭಿವೃದ್ಧಿ ಬಗ್ಗೆ ಮಾತನಾಡದೆ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ? ಮಹಾತ್ಮಾ ಗಾಂಧಿ ಹಾಗೂ ಸಾವರ್ಕರ್ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ? ಎಂದು ಪ್ರಶ್ನೆ ಮಾಡಿದರು.
ಬೇರೆ ರಾಜ್ಯಗಳಲ್ಲಿ ಏಕೆ ‘ಅನ್ನಭಾಗ್ಯ’ವಿಲ್ಲ?: ‘ಅನ್ನಭಾಗ್ಯ ಯೋಜನೆ ಕೇಂದ್ರ ಸರಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಯೋಜನೆ ಏಕೆ ಇಲ್ಲ? ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದವರು ಮನಮೋಹನ್ ಸಿಂಗ್ ಜನರ ತೆರಿಗೆ ಹಣದಲ್ಲಿ ಜನರಿಗೆ ಅಕ್ಕಿ ನೀಡಲು ಸರಕಾರಕ್ಕೆ ಇರುವ ಸಮಸ್ಯೆಯಾದರೂ ಏನು? ಎಂದು ಸಿದ್ದರಾಮಯ್ಯ ಕೇಳಿದರು.
ಉದ್ಯಮಿಗಳ ಸಾಲಮನ್ನಾವೇಕೆ?: ‘ರೈತರ ಸಾಲಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಉದ್ಯಮಿಗಳ ಸಾಲಮನ್ನಾ ಮಾಡಿದ್ದೀರಲ್ಲ ಇದು ಸರಿಯೇ?. 12 ಲಕ್ಷಕ್ಕೂ ಹೆಚ್ಚು ಕೋಟಿ ರೂ. ಸಾಲಮನ್ನಾ ಮಾಡಿದ್ದೀರಿ. ಯಾವ ಕಾರಣಕ್ಕೆ ಉದ್ಯಮಿಗಳ ಸಾಲಮನ್ನಾ ಮಾಡಿದ್ದೀರಾ ಹೇಳಿ? ಇದು ಬಿಜೆಪಿಯವರ ಚಿಂತನೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.







