ಅದಾನಿ ಗ್ರೂಪ್ ಶೇರುಗಳಲ್ಲಿ ನಿಲ್ಲದ ಕುಸಿತ: 22 ದಿನಗಳಲ್ಲಿಅರ್ಧಕ್ಕೂ ಹೆಚ್ಚು ನಿವ್ವಳ ಸಂಪತ್ತು ನಷ್ಟ

ಹೊಸದಿಲ್ಲಿ, ಫೆ.14: ಅದಾನಿ ಗ್ರೂಪ್ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಅಮೆರಿಕದ ಹಿಂಡನ್ಬರ್ಗ್ ರೀಸರ್ಚ್ ವರದಿ ಬಿಡುಗಡೆಗೊಂಡಾಗಿನಿಂದ ಕೇವಲ 22 ದಿನಗಳಲ್ಲಿ ತನ್ನ ಅರ್ಧಕ್ಕೂ ಹೆಚ್ಚಿನ ನಿವ್ವಳ ಸಂಪತ್ತನ್ನು (66 ಶತಕೋಟಿ ಡಾ.) ಕಳೆದುಕೊಂಡಿದ್ದು,ಮಂಗಳವಾರವೂ ಶೇರು ಮಾರುಕಟ್ಟೆಗಳಲ್ಲಿ ಅದಾನಿ ಕಂಪನಿಗಳ ಶೇರುಗಳಲ್ಲಿ ರಕ್ತಪಾತ ಮುಂದುವರಿದಿತ್ತು.
ಮಂಗಳವಾರ ಒಂದು ಹಂತದಲ್ಲಿ ಅದಾನಿ ಗ್ರೂಪ್ನ 10 ಕಂಪನಿಗಳ ಶೇರುಗಳ ಪೈಕಿ ಹೆಚ್ಚುಕಡಿಮೆ ಎಲ್ಲವೂ ಲೋವರ್ ಸರ್ಕ್ಯೂಟ್ನಲ್ಲಿ ಲಾಕ್ ಆಗಿದ್ದವು ಅಥವಾ ಬೆಲೆಗಳು ಕುಸಿದಿದ್ದವು,ತನ್ಮೂಲಕ ಅದಾನಿ ಒಂದೇ ದಿನದಲ್ಲಿ 3.40 ಶತಕೋಟಿ.ಡಾ.ನಷ್ಟವನ್ನು ಅನುಭವಿಸಿದ್ದಾರೆ. ಅಪರಾಹ್ನ ಶೇರು ಮಾರುಕಟ್ಟೆಗಳು ಮುಕ್ತಾಯಗೊಂಡಾಗ ಕೇವಲ ಮೂರು ಕಂಪನಿಗಳ ಶೇರುಗಳು ಚೇತರಿಸಿಕೊಂಡು ಇಂದಿನ ವಹಿವಾಟದಲ್ಲಿ ಕೊಂಚ ಮಟ್ಟಿಗೆ ಲಾಭ ದಾಖಲಿಸಿವೆ.
ಅದಾನಿ ಗ್ರೀನ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಎನ್ಡಿಟಿವಿ, ಅದಾನಿ ವಿಲ್ಮರ್ ಮತ್ತು ಅದಾನಿ ಟೋಟಲ್ ಗ್ಯಾಸ್ನ ಶೇರುಗಳು ಶೇ.5ರಷ್ಟು ನಷ್ಟದೊಂದಿಗೆ ಲೋವರ್ ಸರ್ಕ್ಯೂಟ್ನಲ್ಲಿ ಲಾಕ್ ಆಗಿದ್ದರೆ, ಅಂಬುಜಾ ಸಿಮೆಂಟ್ಸ್ ಶೇ.2.06 ರಷ್ಟು ನಷ್ಟವನ್ನು ಅನುಭವಿಸಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಎಸಿಸಿ ಕೂಡ ಬೆಳಗಿನ ವ್ಯವಹಾರದಲ್ಲಿ ಕುಸಿತ ಅನುಭವಿಸಿದ್ದು, ನಂತರ ಕೊಂಚ ಚೇತರಿಸಿಕೊಂಡು ವಹಿವಾಟಿನ ಅಂತ್ಯದಲ್ಲಿ ಕ್ರಮವಾಗಿ ಶೇ.1.88,ಶೇ.1.86 ಮತ್ತು ಶೇ.0.57ರಷ್ಟು ಗಳಿಕೆಯೊಂದಿಗೆ ಮುಕ್ತಾಯಗೊಂಡಿವೆ.
ಜ.14ರಂದು 119 ಶತಕೋಟಿ ಡಾ.ಗಳಷ್ಟಿದ್ದ ಅದಾನಿಯವರ ನಿವ್ವಳ ಸಂಪತ್ತು ಹಿಂಡನ್ಬರ್ಗ್ ವರದಿಯ ಬಳಿಕ 52.4 ಶತಕೋಟಿ ಡಾ.ಗೆ ಕುಸಿದಿದೆ. ಪರಿಣಾಮವಾಗಿ ವಿಶ್ವ ಬಿಲಿಯಾಧಿಪತಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 24ನೇ ಸ್ಥಾನಕ್ಕೆ ಜಾರಿದ್ದಾರೆ. ಅದಾನಿ ಕಂಪನಿಗಳ ಶೇರುಗಳ ಭರಾಟೆಯಿಂದಾಗಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಅದಾನಿ ಕಳೆದುಕೊಂಡಿದ್ದು,ಅದೀಗ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿಯವರ ಪಾಲಾಗಿದೆ.







