ಏರ್ ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿರುವ ಏರ್ ಇಂಡಿಯಾ
ಈವರೆಗಿನ ಅತ್ಯಂತ ದೊಡ್ಡ ವೈಮಾನಿಕ ಒಪ್ಪಂದ

ಹೊಸದಿಲ್ಲಿ, ಫೆ.14: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಯುರೋಪ್ ನ ಏರ್ಬಸ್ ಕಂಪನಿಯಿಂದ 250 ವಿಮಾನಗಳನ್ನು ಖರೀದಿಸಲಿದೆ. ಎ350 ವೈಡ್ ಬಾಡಿ ಅಲ್ಟ್ರಾ ಲಾಂಗ್ ಶ್ರೇಣಿಯ 40 ವಿಮಾನಗಳು ಮತ್ತು ನ್ಯಾರೋಬಾಡಿ ಶ್ರೇಣಿಯ 210 ವಿಮಾನಗಳು ಇವುಗಳಲ್ಲಿ ಸೇರಿದ್ದು, ಇದು ವಿಮಾನಯಾನ ಕ್ಷೇತ್ರದ ಇತಿಹಾಸದಲ್ಲಿ ಈವರೆಗಿನ ಅತ್ಯಂತ ದೊಡ್ಡ ಖರೀದಿ ಒಪ್ಪಂದವಾಗಿದೆ.
‘ಏರ್ಬಸ್ನೊಂದಿಗೆ ನಾವು ಅತ್ಯುತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ. ಏರ್ಬಸ್ನಿಂದ 250 ವಿಮಾನಗಳ ಖರೀದಿಗೆ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ’ ಎಂದು ಟಾಟಾ ಸನ್ಸ್ನ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಉಪಸ್ಥಿತರಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
ಒಪ್ಪಂದವನ್ನು ಪ್ರಶಂಸಿಸಿದ ಮೋದಿ, ಇದು ಭಾರತೀಯ ನಾಗರಿಕ ವಾಯುಯಾನ ಕ್ಷೇತ್ರದ ಯಶಸ್ಸು ಮತ್ತು ಆಕಾಂಕ್ಷೆಗಳನ್ನು ತೋರಿಸುತ್ತಿದೆ. ಇಂದು ನಾಗರಿಕ ವಾಯುಯಾನವು ಭಾರತದ ಬೆಳವಣಿಗೆಯ ಅಖಂಡ ಭಾಗವಾಗಿದೆ ಎಂದು ಹೇಳಿದರು.
17 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಏರ್ ಇಂಡಿಯಾ ವಿಮಾನ ಖರೀದಿಗೆ ಬೇಡಿಕೆಯನ್ನು ಸಲ್ಲಿಸಿರುವುದು ಇದೇ ಪ್ರಥಮವಾಗಿದೆ. ಇದು ಟಾಟಾ ಗ್ರೂಪ್ನ ಒಡೆತನದಡಿ ಮೊದಲ ಆರ್ಡರ್ ಕೂಡ್ ಆಗಿದೆ. ಏರ್ ಇಂಡಿಯಾ ಕೊನೆಯದಾಗಿ 2005ರಲ್ಲಿ 10.8 ಶತಕೋಟಿ ಡಾ.ವೆಚ್ಚದಲ್ಲಿ 68 ಬೋಯಿಂಗ್ ಮತ್ತು 43 ಏರ್ಬಸ್ ವಿಮಾನಗಳು ಸೇರಿದಂತೆ 111 ವಿಮಾನಗಳ ಖರೀದಿಗಾಗಿ ಬೇಡಿಕೆಯನ್ನು ಸಲ್ಲಿಸಿತ್ತು. ಜ.27ರಂದು ಟಾಟಾ ಗ್ರೂಪ್ ಏರ್ಇಂಡಿಯಾ ಸ್ವಾಧೀನದ ಮೊದಲ ವರ್ಷವನ್ನು ಪೂರ್ಣಗೊಳಿಸಿತ್ತು.







