ನಟ ಜಾವೇದ್ ಖಾನ್ ಅಮ್ರೋಹಿ ನಿಧನ

ಮುಂಬೈ, ಫೆ. 14: ಡಿಡಿ ಧಾರಾವಾಹಿ ‘ನುಕ್ಕಡ್’ ಹಾಗೂ ಜನಪ್ರಿಯ ಚಿತ್ರಗಳಾದ ‘ಲಗಾನ್’, ‘ಚಕ್ ದೇ ಇಂಡಿಯಾ’ದಲ್ಲಿ ನಟಿಸಿದ್ದ ರಂಗ ಭೂಮಿ ಕಲಾವಿದ ಹಾಗೂ ಚಿತ್ರ ನಟ ಜಾವೇದ್ ಖಾನ್ ಅಮ್ರೋಹಿ (70) ಅವರು ಮಂಗಳವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಜಾವೇದ್ ಖಾನ್ ಅಮ್ರೋಹಿ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಕಳೆದ 1 ವರ್ಷಗಳಿಂದ ಹಾಸಿಗೆಯಲ್ಲೇ ಇದ್ದರು.
ಮುಂಬೈಯ ಉಪ ನಗರದಲ್ಲಿರುವ ಸೂರ್ಯ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಚಿತ್ರ ನಿರ್ದೇಶಕ ರಮೇಶ್ ತಲ್ವಾರ್ ಅವರು ತಿಳಿಸಿದ್ದಾರೆ. ‘‘ಎರಡೂ ಶ್ವಾಸಕೋಸಗಳು ವಿಫಲವಾಗಿ ಅವರು ಅಪರಾಹ್ನ ಸುಮಾರು 1 ಗಂಟೆಗೆ ನಿಧನರಾದರು’’ ಎಂದು ಅವರು ತಿಳಿಸಿದ್ದಾರೆ. ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ)ದಲ್ಲಿ ಪದವಿ ಪಡೆದ ಬಳಿಕ ಅವರು ರಂಗಭೂಮಿಯಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದರು. ಅನಂತರ 150ಕ್ಕೂ ಅಧಿಕ ಚಲನಚಿತ್ರಗಳು ಹಾಗೂ 12ಕ್ಕೂ ಅಧಿಕ ಟಿ.ವಿ. ಕಾರ್ಯಕ್ರಮಗಳಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರಗಳನ್ನು ನಟಿಸಿದರು.





