ಮಂಗಳೂರು: ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಮೃತ್ಯು

ಮಂಗಳೂರು: ನಗರ ಹೊರವಲಯದ ಮೇರಮಜಲು ಸಮೀಪದ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಬಿಹಾರ ಮೂಲದ ಪ್ರಸ್ತುತ ಮೇರಮಜಲು ಬಾಡಿಗೆ ಮನೆ ನಿವಾಸಿ ಬಬ್ಲು (36) ಮೃತಪಟ್ಟ ಕಾರ್ಮಿಕ.
ಇವರು ಮೇರಮಜಲು ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಯೊಂದರ ಒಂದನೇ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಒಂದು ವಾರದ ಹಿಂದೆ ಬಿಹಾರದಿಂದ ಆಗಮಿಸಿ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ. ಬಬ್ಲು ಕುಟುಂಬಕರಿಗೆ ವಿಷಯ ತಿಳಿಸಲಾಗಿದ್ದು, ಅವರು ಬಂದ ಬಳಿಕ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





