ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ: ಜಾಗತಿಕ ಮಾಧ್ಯಮ ನಿಗಾ ಸಂಸ್ಥೆಗಳ ಪ್ರತಿಕ್ರಿಯೆ ಹೇಗಿತ್ತು?

ಹೊಸದಿಲ್ಲಿ: ಬಿಬಿಸಿಯ ಹೊಸ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಮೇಲೆ ಭಾರತ ಸರ್ಕಾರವು ನಡೆಸಿರುವ ಅದಾಯ ತೆರಿಗೆ ದಾಳಿಯನ್ನು ಮಂಗಳವಾರ ಖಂಡಿಸಿರುವ ಜಾಗತಿಕ ಮಾಧ್ಯಮ ನಿಗಾ ಸಂಸ್ಥೆಗಳು, ಈ ಕ್ರಮವನ್ನು ಅಭಿವ್ಯಕ್ತಿ ಸ್ವಾಂತಂತ್ರ್ಯಕ್ಕೆ ಒಡ್ಡಿರುವ ಬೆದರಿಕೆಯ ತಂತ್ರವಾಗಿದ್ದು, ದೌರ್ಜನ್ಯಕಾರಿಯಾಗಿದೆ ಎಂದು ಹೇಳಿವೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಈ ದಾಳಿಯು ತೆರಿಗೆ ವಂಚನೆ ಆರೋಪದ ಕುರಿತ ತನಿಖೆಯ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಆದಾಯ ತೆರಿಗೆ ಇಲಾಖೆಯ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ ಮೂಲದ ಬ್ರಿಟಿಷ್ ಪಬ್ಲಿಕ್ ಬ್ರಾಡ್‌ಕಾಸ್ಟರ್ ಸಂಸ್ಥೆ, ನಾವು ತನಿಖಾ ಸಂಸ್ಥೆಗಳಿಗೆ ಪೂರ್ಣ ಸಹಕಾರ ನೀಡುತ್ತಿದ್ದು, ಎಷ್ಟು ಸಾಧ್ಯವೋ ಅಷ್ಟು ಬೇಗ ಬಗೆಹರಿಯಲಿದೆ ಎಂಬ ಆಶಾವಾದ ಹೊಂದಿದ್ದೇವೆ ಎಂದು ತಿಳಿಸಿದೆ.
ಆದಾಯ ತೆರಿಗೆ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ಮೂಲದ ಸ್ವತಂತ್ರ ಲಾಭರಹಿತ ಸಂಸ್ಥೆಯಾದ ಪತ್ರಕರ್ತರ ರಕ್ಷಣಾ ಸಮಿತಿ(CPJ)ಯು, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ಸರ್ಕಾರವನ್ನು ಆಗ್ರಹಿಸಿದೆ.
"ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿರುವ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಕ್ಕಾಗಿ ಭಾರತದಲ್ಲಿನ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿರುವುದು ಬೆದರಿಕೆಯ ತಂತ್ರವಾಗಿದೆ" ಎಂದು ಸಿಪಿಜೆಯ ಏಷ್ಯಾ ಕಾರ್ಯಕ್ರಮ ಸಮನ್ವಯಕಾರ ಬೇಹ್ ಲಿಹ್ ಯಿ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪತ್ರಕರ್ತರ ರಕ್ಷಣಾ ಸಮಿತಿಯು, ವಿಮರ್ಶಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡಿದ ಸುದ್ದಿ ಸಂಸ್ಥೆಗಳನ್ನು ಈ ಹಿಂದೆಯೂ ಗುರಿಯಾಗಿಸಿಕೊಂಡಿದ್ದು, ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೌಲ್ಯದ ಉಳಿವಿಗಾಗಿ ಬಿಬಿಸಿ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಬೇಕಿದೆ" ಎಂದು ಆಗ್ರಹಿಸಿದೆ.
"@narendramodi ವಿರುದ್ಧದ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ ಮೂರು ವಾರಗಳ ನಂತರ @BBCWorld in #Inde ಕಚೇರಿ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆಯ ದಾಳಿಯು ಆಕ್ರಮಣಕಾರಿ ಪ್ರತೀಕಾರದ ಉದ್ದೇಶ ಹೊಂದಿದೆ. ಭಾರತ ಸರ್ಕಾರವನ್ನು ವಿಮರ್ಶಿಸುವವರನ್ನು ಮೌನವಾಗಿಸಲು ನಡೆಯುವ ಇಂತಹ ಕ್ರಮಗಳನ್ನು RSF ಖಂಡಿಸುತ್ತದೆ" ಎಂದು ಪ್ಯಾರಿಸ್ ಮೂಲದ Reporters Without Borders ಸಂಸ್ಥೆ ಟ್ವೀಟ್ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ Amnesty International, "ಈ ದಾಳಿಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆದರಿಕೆ ತಂತ್ರದ ಮೂಲಕ ಮುಖಾಮುಖಿಯಾಗುವ ಕ್ರಮಗಳಾಗಿವೆ" ಎಂದು ಟೀಕಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, " ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಕುರಿತು ವಿಮರ್ಶಾತ್ಮಕ ವರದಿ ಪ್ರಸಾರ ಮಾಡಿದ್ದಕ್ಕಾಗಿ ಭಾರತೀಯ ಪ್ರಾಧಿಕಾರಗಳು ಬಿಬಿಸಿ ಸುದ್ದಿ ಸಂಸ್ಥೆಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡಲು ಪ್ರಯತ್ನಿಸುತ್ತಿವೆ. ಆದಾಯ ತೆರಿಗೆ ಇಲಾಖೆಯ ಅನಿರ್ಬಂಧಿತ ಅಧಿಕಾರವನ್ನು ಅಸ್ತ್ರದಂತೆ ಬಳಸಿಕೊಂಡು ಭಿನ್ನಮತವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಕಳೆದ ವರ್ಷ Oxfam India ಸೇರಿದಂತೆ ಹಲವಾರು ಸರ್ಕಾರೇತರ ಸಂಸ್ಥೆಗಳ ಕಚೇರಿಗಳ ಮೇಲೂ ದಾಳಿ ನಡೆಸಲಾಗಿತ್ತು. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಂತಹ ಬೆದರಿಕೆಯ ಕ್ರಮಗಳ ಮೂಲಕ ಹತ್ತಿಕ್ಕುವುದು ಇಂದಿಗೇ ಕೊನೆಯಾಗಬೇಕಿದೆ" ಎಂದು ಆಗ್ರಹಿಸಿದೆ.
ಬ್ರಿಟನ್ ಮೂಲದ ಮಾನವ ಹಕ್ಕು ಸಂಘಟನೆಯಾದ The South Solidarity Group ಈ ಕ್ರಮವನ್ನು "ದೌರ್ಜ್ಯಕಾರಿ ಪ್ರತೀಕಾರದ ನಡೆ" ಎಂದು ಬಣ್ಣಿಸಿದೆ.
ಈ ಕುರಿತು ಹೊಸ ದಿಲ್ಲಿಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, "ಈ ಸಮೀಕ್ಷೆಯನ್ನು ಅಂತಾರಾಷ್ಟ್ರೀಯ ತೆರಿಗೆ ಮತ್ತು ಬಿಬಿಸಿ ಅಧೀನ ಸಂಸ್ಥೆಗಳ ವರ್ಗಾವಣೆ ದರಗಳ ಕುರಿತಂತೆ ನಡೆಸಲಾಗಿದ್ದು, ಈ ಹಿಂದೆಯೂ ಈ ಕುರಿತು ಬಿಬಿಸಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಬಿಬಿಸಿ ಉದ್ಧಟತನ ಹಾಗೂ ಅವಿಧೇಯತೆಯಿಂದ ವರ್ತಿಸಿತ್ತು ಎಂದು ಆರೋಪಿಸಿದ್ದಾರೆ.
ಬಿಬಿಸಿ ಸುದ್ದಿ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿಯು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಡೆದಿದ್ದ ಗೋಧ್ರಾ ಗಲಭೆ ಕುರಿತು "India: The Modi Question" ಎಂಬ ಸಾಕ್ಷ್ಯಚಿತ್ರವನ್ನು ಎರಡು ಕಂತುಗಳಲ್ಲಿ ಪ್ರಸಾರ ಮಾಡಿದ ಮೂರ್ನಾಲ್ಕು ವಾರಗಳ ಅಂತರದಲ್ಲಿ ಬಿಬಿಸಿಯ ಭಾರತದ ಕಚೇರಿಗಳ ಮೇಲೆ ಅದಾಯ ತೆರಿಗೆ ಇಲಾಖೆಯ ದಾಳಿ ನಡೆಸಲಾಗಿದೆ.







