ಶತಮಾನದ ಬಳಿಕ ಬೆಳಕು ಕಾಣುತ್ತಿರುವ ಅಂಬೇಡ್ಕರ್ ಅರ್ಥಶಾಸ್ತ್ರ ಮಹಾಪ್ರಬಂಧ

ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಎಂಎಸ್ಸಿ ಪದವಿಯ ಭಾಗವಾಗಿ ಅಂಬೇಡ್ಕರ್ ಬರೆದ ಈ ಮಹಾಪ್ರಬಂಧವನ್ನು ಪ್ರಕಟಿಸಲು ಮಹಾರಾಷ್ಟ್ರ ಸರಕಾರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಕರ ಸಾಮಗ್ರಿ ಪ್ರಕಟನಾ ಸಮಿತಿ ಯೋಜಿಸಿದೆ. ಸಮಿತಿ ಪ್ರಕಟಿಸಲಿರುವ ಅಂಬೇಡ್ಕರ್ ಕೃತಿಗಳ 23ನೇ ಸಂಪುಟವಾಗಿ ಈ ಪ್ರಬಂಧ ಬೆಳಕು ಕಾಣಲಿದೆ.
ವಸಾಹತುಶಾಹಿ ಕಾಲದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ ಕುರಿತ ಅಂಬೇಡ್ಕರ್ ಅವರ ಅಪ್ರಕಟಿತ ಮಹಾಪ್ರಬಂಧ ಕಡೆಗೂ ಶತಮಾನದ ಬಳಿಕ ಪ್ರಕಟವಾಗುತ್ತಿದೆ. ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಎಂಎಸ್ಸಿ ಪದವಿಯ ಭಾಗವಾಗಿ ಅಂಬೇಡ್ಕರ್ ಬರೆದ ಈ ಮಹಾಪ್ರಬಂಧವನ್ನು ಪ್ರಕಟಿಸಲು ಮಹಾರಾಷ್ಟ್ರ ಸರಕಾರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಕರ ಸಾಮಗ್ರಿ ಪ್ರಕಟನಾ ಸಮಿತಿ ಯೋಜಿಸಿದೆ. ಸಮಿತಿ ಪ್ರಕಟಿಸಲಿರುವ ಅಂಬೇಡ್ಕರ್ ಕೃತಿಗಳ 23ನೇ ಸಂಪುಟವಾಗಿ ಈ ಪ್ರಬಂಧ ಬೆಳಕು ಕಾಣಲಿದೆ.
1978ರಲ್ಲಿ ರಚನೆಗೊಂಡ ಈ ಸಮಿತಿ ಎಪ್ರಿಲ್ 1979ರಿಂದ ಅಂಬೇಡ್ಕರ್ ಅವರ ಬರಹಗಳ 22 ಸಂಪುಟಗಳನ್ನು ಪ್ರಕಟಿಸಿದೆ. ಈಗ ಪ್ರಕಟವಾಗಲಿರುವ ಸಂಪುಟ ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದು ಎಂಎಸ್ಸಿ ಪ್ರಬಂಧ ಹಾಗೂ ಇನ್ನೊಂದು ಅವರ ಎಂಎ., ಎಂಎಸ್ಸಿ, ಪಿಎಚ್.ಡಿ. ಮತ್ತು ಕಾನೂನು ಪದವಿಗಳಿಗೆ ಸಂಬಂಧಿಸಿದ ಸಂವಹನ ಮತ್ತು ದಾಖಲೆಗಳನ್ನು ಹೊಂದಿರುತ್ತದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರದೀಪ್ ಅಗ್ಲೇವ್ ಹೇಳಿದ್ದಾರೆ. ಒಂದು ಶತಮಾನದ ನಂತರ ಈ ಪ್ರಬಂಧವನ್ನು ಪ್ರಕಟಿಸುತ್ತಿರುವುದು ಗಮನಾರ್ಹ ಎಂಬುದು ‘ದಲಿತ ಪ್ಯಾಂಥರ್ಸ್’ ಸಂಸ್ಥಾಪಕ ಜೆ.ವಿ. ಪವಾರ್ ಅಭಿಪ್ರಾಯ.
‘‘ಈ ಕೃತಿ ತೆರಿಗೆ ಮತ್ತು ವ್ಯಯದ ಕುರಿತದ್ದು. ಈ ಪ್ರಬಂಧದ ಸಮಕಾಲೀನ ಪ್ರಸ್ತುತತೆ ಏನೆಂದರೆ ಅದು ಆದಾಯ ಮಟ್ಟಗಳ ಆಧಾರದ ಮೇಲೆ ಪ್ರಗತಿಪರ ತೆರಿಗೆಯನ್ನು ಬಯಸುತ್ತದೆ. ರಕ್ಷಣೆಯಂತಹ ವಲಯಗಳ ಮೇಲಿನ ವೆಚ್ಚವು ದೊಡ್ಡದಾಗಿದೆ ಮತ್ತು ಅದನ್ನು ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ನೀರು ಪೂರೈಕೆಯಂತಹ ಸಾಮಾಜಿಕ ಅಗತ್ಯಗಳಿಗೆ ಒದಗಿಸುವ ಅಗತ್ಯವಿದೆ ಎಂಬುದು ಅಂಬೇಡ್ಕರ್‌ವಾದ’’ಎಂದು ಅರ್ಥಶಾಸ್ತ್ರಜ್ಞ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಹೇಳುತ್ತಾರೆ.
ಇದೇ ಸಮಿತಿ ಪ್ರಕಟಿಸಿದ ಆರನೇ ಸಂಪುಟ (1989), ಅರ್ಥಶಾಸ್ತ್ರದ ಕುರಿತು ಅಂಬೇಡ್ಕರ್ ಬರಹಗಳನ್ನು ಒಳಗೊಂಡಿದೆ. ಇದು ಅವರ ‘ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಮತ್ತು ಹಣಕಾಸು’ (1915) ಮತ್ತು ‘ರೂಪಾಯಿ ಸಮಸ್ಯೆ: ಅದರ ಮೂಲ ಮತ್ತು ಅದರ ಪರಿಹಾರ’ (1923) ದಂತಹ ಕೃತಿಗಳನ್ನು ಒಳಗೊಂಡಿದೆ. ಆದರೆ, ಪ್ರಾಂತೀಯ ಹಣಕಾಸು ಕುರಿತ ಈ ಎಂಎಸ್ಸಿ ಪ್ರಬಂಧ ಆಗ ಲಭ್ಯವಿಲ್ಲದ ಕಾರಣದಿಂದ ಸೇರಿಸಲಾಗಿರಲಿಲ್ಲ ಎನ್ನುತ್ತಾರೆ ಥೋರಟ್.
ಜಿನೀವಾ ಮೂಲದ ಕಾರ್ಮಿಕ ಅರ್ಥಶಾಸ್ತ್ರಜ್ಞ ಜೆ. ಕೃಷ್ಣಮೂರ್ತಿ ಲಂಡನ್‌ನ ಸೆನೆಟ್ ಹೌಸ್ ಲೈಬ್ರರಿಯಲ್ಲಿ ಈ ಪ್ರಬಂಧ ಪತ್ತೆ ಮಾಡಿ, ಥೋರಟ್ ಅವರಿಗೆ ತಿಳಿಸಿದರು. ಬಳಿಕ ಥೋರಟ್ ಲಂಡನ್‌ನಲ್ಲಿರುವ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಮಿಷನ್‌ನ ಗೌತಮ್ ಚಕ್ರವರ್ತಿ ಅವರೊಂದಿಗೆ ಚರ್ಚಿಸಿದರು. ಲಂಡನ್‌ನ ಮತ್ತೊಬ್ಬ ಅಂಬೇಡ್ಕರ್‌ವಾದಿ ಸಂತೋಷ್ ದಾಸ್ ಈ ಕೃತಿಯ ಮರುಪ್ರಕಟಣೆಗೆ ಅನುಮತಿಗಾಗಿ ಶುಲ್ಕ ಪಾವತಿಸಿದರು. ಪ್ರಬಂಧದ ಸಾಫ್ಟ್ ಪ್ರತಿ ನವೆಂಬರ್ 18, 2021ರಂದು ಸಮಿತಿ ಕೈಗೆ ಬಂತು.
ಅಂಬೇಡ್ಕರ್ ಅವರ ಜೀವನಚರಿತ್ರೆಕಾರ ಚಂಗ್ದೇವ್ ಭಾವನರಾವ್ ಖೈರ್ಮೋಡ್, ಅಂಬೇಡ್ಕರ್ ಎಂಎಸ್ಸಿಗಾಗಿ ಲಂಡನ್‌ನಲ್ಲಿ ಅವಿರತವಾಗಿ ಹೇಗೆ ಕೆಲಸ ಮಾಡಿದರು ಎಂದು ಬರೆಯುತ್ತಾರೆ. ಅಂಬೇಡ್ಕರ್ ಅವರು 11 ಪೌಂಡ್ ಮತ್ತು 11 ಶಿಲ್ಲಿಂಗ್ ಶುಲ್ಕ ಪಾವತಿಸಿ ಸೆಪ್ಟಂಬರ್ 30, 1920ರಂದು ಎಲ್‌ಎಸ್‌ಇಯಲ್ಲಿ ತಮ್ಮ ಎಂಎಸ್ಸಿಗೆ ಪ್ರವೇಶ ಪಡೆದರು. ಅವರಿಗೆ 11,038 ನಂಬರಿನ ವಿದ್ಯಾರ್ಥಿ ಪಾಸ್ ನೀಡಲಾಯಿತು.
ಅಂಬೇಡ್ಕರ್ ಮುಂಬೈನಲ್ಲಿ ತಮ್ಮ ಎಂಎಸ್ಸಿಗೆ ತಯಾರಿ ನಡೆಸಿದ್ದರು. ಆದರೂ ಲಂಡನ್‌ನ ನಾಲ್ಕು ಗ್ರಂಥಾಲಯಗಳಿಂದ ಪುಸ್ತಕಗಳು ಮತ್ತು ವರದಿಗಳನ್ನು ಅಧ್ಯಯನ ಮಾಡತೊಡಗಿದರು. ಅವುಗಳೆಂದರೆ ಲಂಡನ್ ವಿಶ್ವವಿದ್ಯಾನಿಲಯದ ಜನರಲ್ ಲೈಬ್ರರಿ, ಗೋಲ್ಡ್ ಸ್ಮಿತ್ಸ್ ಲೈಬ್ರರಿ ಆಫ್ ಇಕನಾಮಿಕ್ ಲಿಟರೇಚರ್ ಹಾಗೂ ಬ್ರಿಟಿಷ್ ಮ್ಯೂಸಿಯಂ ಮತ್ತು ಇಂಡಿಯಾ ಆಫೀಸ್‌ನಲ್ಲಿರುವ ಗ್ರಂಥಾಲಯಗಳು. ಲಂಡನ್‌ನಲ್ಲಿ, ಅಂಬೇಡ್ಕರ್ ಬೆಳಗ್ಗೆ 6 ಗಂಟೆಗೆ ಎದ್ದು, ಅಧ್ಯಯನಕ್ಕಾಗಿ ಗ್ರಂಥಾಲಯಕ್ಕೆ ಧಾವಿಸುತ್ತಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಲ್ಪ ಬಿಡುವು. ಬಳಿಕ ಗ್ರಂಥಾಲಯ ಸಮಯ ಕೊನೆಗೊಳ್ಳುವ ತನಕವೂ ಅಧ್ಯಯನ.
ಕೆಲವು ಗಂಟೆಗಳಷ್ಟೇ ಅವರು ನಿದ್ರಿಸುತ್ತಿದ್ದುದು. ಗ್ರಂಥಾಲಯದ ಬಾಗಿಲು ತೆರೆಯುವ ಮೊದಲೇ ಅವರು ಅದರ ಬಾಗಿಲಲ್ಲಿ ನಿಂತಿರುತ್ತಿದ್ದರು ಎಂದು ಖೈರ್ಮೋಡ್ ಅವರು ಅಂಬೇಡ್ಕರ್ ಅವರ ಮ್ಯಾಜಿಸ್ಟೀರಿಯಲ್ ಕೃತಿಯ ಮೊದಲ ಸಂಪುಟದಲ್ಲಿ ಹೇಳುತ್ತಾರೆ (ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್, ಸಂಪುಟ ಐ). ಇದನ್ನು ಮೊದಲು 1952ರಲ್ಲಿ ಪ್ರಕಟಿಸಲಾಯಿತು. ಗ್ರಂಥಾಲಯದ ಸಿಬ್ಬಂದಿ ಬ್ರಿಟಿಷ್ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಅವರಂತಹ ವಿದ್ಯಾರ್ಥಿಯನ್ನು ನಾವು ನೋಡಿಲ್ಲ, ಮುಂದೆ ನೋಡುವುದೂ ಇಲ್ಲವೇನೊ ಎಂದು ಹೇಳಿದ್ದನ್ನೂ ಅವರು ದಾಖಲಿಸುತ್ತಾರೆ.
ಅಂಬೇಡ್ಕರ್ ಫೆಬ್ರವರಿ 25, 1921ರಂದು ಬಾನ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಕೋರಿ ಜರ್ಮನ್ ಭಾಷೆಯಲ್ಲಿ ಬರೆದ ಪತ್ರವನ್ನೂ ಸಂಪುಟ ಒಳಗೊಂಡಿದೆ. ಅವರು ಸಂಸ್ಕೃತ ಭಾಷೆ ಮತ್ತು ಜರ್ಮನ್ ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಬಯಸಿದ್ದರು. ಶಾಲೆಯಲ್ಲಿ ಜಾತಿಯ ಕಾರಣಕ್ಕೆ ತಾರತಮ್ಯ ಮಾಡಲಾಯಿತು ಮತ್ತು ಸಂಸ್ಕೃತ ಕಲಿಯಲು ಬಿಡಲಿಲ್ಲ. ಬದಲಿಗೆ ಪರ್ಷಿಯನ್ ಕಲಿಯಬೇಕಿತ್ತು. ಅಂಬೇಡ್ಕರ್ ಅವರು ಬಾನ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದರಾದರೂ, ಮೂರು ತಿಂಗಳ ನಂತರ ತಮ್ಮ ಮಹಾಪ್ರಬಂಧವನ್ನು ಪರಿಷ್ಕರಿಸಿ ಪೂರ್ಣಗೊಳಿಸಲು ಲಂಡನ್‌ಗೆ ಮರಳಬೇಕಾಯಿತು.
ರೂಪಾಯಿ ಸಮಸ್ಯೆಯ ಕುರಿತು ಎಲ್‌ಎಸ್‌ಇಯ ಪ್ರೊಫೆಸರ್ ಎಡ್ವಿನ್ ಕ್ಯಾನನ್ ಮಾರ್ಗದರ್ಶನದಲ್ಲಿ ಅಂಬೇಡ್ಕರ್ 1923ರಲ್ಲಿ ತಮ್ಮ ಮಹಾಪ್ರಬಂಧವನ್ನು ಪೂರ್ಣಗೊಳಿಸಿದರು. ಇದನ್ನು ಭಾರತೀಯ ಕರೆನ್ಸಿಯ ಮೇಲಿನ ಗಮನಾರ್ಹ ಸಂಶೋಧನೆ ಎಂದು ವಿವರಿಸಲಾಗಿದೆ.
ಅಂಬೇಡ್ಕರ್ ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡಿ ಪದವಿ ಪಡೆದ ಮೊದಲ ಭಾರತೀಯರು. ಅವರು ಹಣಕಾಸು ಮತ್ತು ಕರೆನ್ಸಿಯಲ್ಲಿ ಪರಿಣತಿ ಹೊಂದಿದ್ದರು. ಅವರ ‘ದಿ ಎವಲ್ಯೂಷನ್ ಆಫ್ ಪ್ರಾವಿನ್ಷಿಯಲ್ ಫೈನಾನ್ಸ್ ಇನ್ ಬ್ರಿಟಿಷ್ ಇಂಡಿಯಾ: ಎ ಸ್ಟಡಿ ಇನ್ ದಿ ಪ್ರಾವಿನ್ಷಿಯಲ್ ಡೀಸೆಂಟ್ರಲೈಸೇಷನ್ ಆಫ್ ಇಂಪೀರಿಯಲ್ ಫೈನಾನ್ಸ್’ (1925), ಕೊಲಂಬಿಯಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಎಡ್ವಿನ್ ಆರ್.ಎ. ಸೆಲಿಗ್ಮನ್ ಅವರ ಮುನ್ನುಡಿಯನ್ನು ಹೊಂದಿದೆ. ಅಂಬೇಡ್ಕರ್ 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
(ಕೃಪೆ: indiatoday.in)







