ತ್ರಿಪುರ ಅಧಿಕಾರಿಗಳೊಂದಿಗೆ ಅಮಿತ್ ಶಾ ಗುಪ್ತ ಸಭೆ: ತನಿಖೆ ನಡೆಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ ಸಿಪಿಎಂ

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ತ್ರಿಪುರಾ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)ದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದು ಆರೋಪಿಸಿದ್ದಾರೆ ಎಂದು scroll.in ವರದಿ ಮಾಡಿದೆ.
"ಜನವರಿ 11ರಂದು ಚುನಾವಣಾ ಪ್ರಚಾರದ ಅಂಗವಾಗಿ ತ್ರಿಪುರಾಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಆರೋಪಿಸಿದ್ದಾರೆ" ಎಂಬ ಅಂಶವನ್ನು ಯೆಚೂರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಮತದಾರರು ಸೇರಿದಂತೆ ಚುನಾವಣಾ ಪ್ರಕ್ರಿಯೆಯ ಪಾಲುದಾರರಾದ ಪ್ರತಿಯೊಬ್ಬರೂ, ಹಿಂಸಾಚಾರ ಮುಕ್ತ ಮತದಾನ ನಡೆಯುವ ಸಾಧ್ಯತೆ ಬಗ್ಗೆ ಅನುಮಾನ ಹೊಂದಿರುವ ಸಂದರ್ಭದಲ್ಲಿ ಮತದಾನಕ್ಕೆ ಮೂರು ದಿನ ಮಾತ್ರ ಬಾಕಿ ಇರುವಾಗ ಇಂತಹ ಗುಪ್ತ ಸಭೆ ನಡೆಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಯಾವುದೇ ವಿಧದಲ್ಲಿ ಚುನಾವಣಾ ಅಕ್ರಮ ನಡೆಸಲು ಈ ಸಭೆಯಲ್ಲಿ ನೀಲಿ ನಕ್ಷೆ ತಯಾರಿಸಲಾಗಿದೆಯೇ ಎಂಬ ಸಂಶಯ ಹುಟ್ಟು ಹಾಕಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆರೋಪದ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಯೆಚೂರಿ, ಒಂದು ವೇಳೆ ಆರೋಪಿ ಅಧಿಕಾರಿಗಳ ವಿರುದ್ಧ ಸಾಂದರ್ಭಿಕ ಸಾಕ್ಷ್ಯಾಧಾರಗಳು ಲಭ್ಯವಾದರೆ, ಅಂಥ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅಂಥವರ ವಿರುದ್ಧ ಇಲಾಖಾ ತನಿಖೆಯನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಫೆಬ್ರವರಿ 16ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಕಾಂಗ್ರೆಸ್ ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ) ತ್ರಿಪುರಾ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಕಳೆದ ಬಾರಿಯ 2018ರ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)ದ 25 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದ್ದ ಬಿಜೆಪಿ, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು.







