ನಳಿನ್ ಕುಮಾರ್ ಕಟೀಲ್ ಆಡುವ ಭಾಷೆ ಖುದ್ದು ಅವರಿಗೆ ಅರ್ಥವಾಗಲ್ಲ: ಎಚ್.ಡಿ ಕುಮಾರಸ್ವಾಮಿ

ಹುಬ್ಬಳ್ಳಿ: 'ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಏನು ಮಾತಾಡುತ್ತಾರೋ ನನಗಂತೂ ಇದುವರೆಗೆ ಅರ್ಥವಾಗಿಲ್ಲ, ಅವರು ಆಡುವ ಭಾಷೆ ಖುದ್ದು ಅವರಿಗೆ ಅರ್ಥವಾಗುತ್ತೋ ಗೊತ್ತಿಲ್ಲ. ಅದಕ್ಕೆಲ್ಲ ಹೆಚ್ಚಿನ ಮಹತ್ವ ಕೊಡ ಬೇಕಾಗಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಹೆಚ್ ಡಿ ದೇವೇಗೌಡರಂಥವರಿಗೇ ಮೋಸ ಮಾಡಿ ಈಚೆ ಬಂದಿದ್ದಾರೆ ಅವರನ್ನು ನಂಬಬೇಡಿ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಕುಮಾರಸ್ವಾಮಿ ಅವರು ಮೇಲಿನಂತೆ ಉತ್ತರಿಸಿದರು.
ಜೆಡಿಎಸ್ ಮುಖಂಡ ಪ್ರಭಾಕರ ರೆಡ್ಡಿ ಮನೆ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ವಿಪಕ್ಷಗಳ ಮೇಲೆ 2-3 ತಿಂಗಳು ಇಂತಹ ಐಟಿ ದಾಳಿ ನಡೆಯುತ್ತವೆ. ಚುನಾವಣೆ ಸಂದರ್ಭದಲ್ಲಿ ಇಂತಹ ಐಟಿ ದಾಳಿ ಸಾಮಾನ್ಯ, ಅದು ಯಾಕೆ ಅಂತ ಎಲ್ಲರಿಗೂ ಗೊತ್ತು'' ಎಂದು ಹೇಳಿದರು.
''ಜೆಡಿಎಸ್ ರಾಷ್ಟ್ರೀಯ ಪಕ್ಷ ಅಂತ ನೋಂದಣಿಯಾಗಿದ್ದರೂ ಪ್ರಾದೇಶಿಕ ಪಕ್ಷದ ಮಾನ್ಯತೆ ಮಾತ್ರ ಇರೋದು. ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತು ಜನ ಜನತಾ ದಳವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಜನಾರ್ಧನ ರೆಡ್ಡಿ ಅವರ ಪಕ್ಷದಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ನಷ್ಟ ಆಗಲಿದೆ'' ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಕಾರವಾರ ಸಿಂಗಾಪುರಕ್ಕೆ ಹೋಗಿದೆ ಎಂದ ನಳಿನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಹೀಗೆ...







