ವಿಧಾನಸಭೆ ಚುನಾವಣೆಯಲ್ಲಿ ನಾನಾಗಲಿ, ನನ್ನ ಮಗನಾಗಲಿ ಸ್ಪರ್ಧಿಸುವುದಿಲ್ಲ: ವೀರಪ್ಪ ಮೊಯ್ಲಿ
''ರಾಜ್ಯ ಸರ್ಕಾರ ಜಾಹೀರಾತು ಮೂಲಕ ಉಸಿರಾಡುತ್ತಿದೆ''

ಮೈಸೂರು: 'ನಾನಾಗಲಿ ನನ್ನ ಮಗನಾಗಲಿ ಮುಂಬರುವ ವಿಧನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ''ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ ನಾನು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಾಸು ಗೆ ಟಿಕೆಟ್ ಸಿಗಬೇಕು ಎನ್ನಲು ನಾನು ಅವರ ವಕೀಲರಲ್ಲ, ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸಿ ಯಾರು ಗೆಲ್ಲುತ್ತಾರೊ ಅವರಿಗೆ ಟಿಕೆಟ್ ನೀಡಲಿದೆ'' ಎಂದು ಹೇಳಿದರು.
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಜಾಹೀರಾತು ಮೂಲಕ ಉಸಿರಾಡುತ್ತಿದೆ. ನಿತ್ಯ ಪತ್ರಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಇರುವ ಜಾಹೀರಾತು ನೋಡುತ್ತಿದ್ದೇವೆ. ಪೇಯ್ಡ್ ಜಾಹೀರಾತು ಮೂಲಕ ಪ್ರಚಾರ ಪಡೆಯುತ್ತಿದೆ'' ಎಂದು ಟೀಕಿಸಿದರು.
'ಮುಖ್ಯಮಂತ್ರಿಯಾಗಿ ಜೈಲಿಗೋದ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿಗೆ ಧೈರ್ಯವೂ ಇಲ್ಲ. ಕೆಲಸವೂ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ ಇವರೊಬ್ಬ ವೇಸ್ಟ್ ಮುಖ್ಯಮಂತ್ರಿ' ಎಂದು ವಾಗ್ದಾಳಿ ನಡೆಸಿದರು.
2023ರಲ್ಲಿ ಕಾಂಗ್ರೆಸ್ ಅಧಿಕಾರ: ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮನಮೋಹನ ಸಿಂಗ್ ಸರ್ಕಾರದಲ್ಲಿ ನರೇಗಾ ಯೋಜನೆ ಜಾರಿಗೊಳಿಸಿದಂತೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದರು.
ವೀರಪ್ಪ ಮೊಯ್ಲಿ ಬಿಜೆಪಿಗೆ ಹೋಗುವರೇ? ಅಥವಾ ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ನಾನು ಸತ್ತ ಮೇಲೆ ನಿಮಗೇ ಉತ್ತರ ಸಿಗುತ್ತದೆ. 2015ರಿಂದ ಕೇಂದ್ರ ಚುನಾವಣಾ ಸಮಿತಿ ಸದಸ್ಯನಾಗಿದ್ದೇನೆ. ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆ ಬಗ್ಗೆ ಈಗ ಚಿಂತಿಸಬೇಕಿದೆ' ಎಂದು ಪ್ರತಿಕ್ರಿಯಿಸಿದರು.
''ಮೂಲ ಕಾಂಗ್ರೆಸ್ಸಿಗ ವಲಸೆ ಕಾಂಗ್ರೆಸ್ಸಿಗೆ ಎಂಬ ಭಿನ್ನತೆ ಇಲ್ಲ. ಟಿಕೇಟ್ ಹಂಚಿಕೆ ವೇಳೆ ಕೆಲವು ಚರ್ಚೆಯಾಗುತ್ತದೆ. ಚುನಾವಣೆ ಬಳಿಕ ಕಾಂಗ್ರೆಸ್ ಒಂದೇ ಇರುತ್ತದೆ. ನನ್ನ ಪ್ರಕಾರ ಗೆಲುವಿಗೆ ಮಾನದಂಡ ಹಣ ಬಲ, ಜಾತಿ ಬಲ ಅಲ್ಲ, ವೈಯಕ್ತಿಕ ವರ್ಚಸ್ಸು ಮುಖ್ಯ'' ಎಂದರು.
''ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಸರ್ಕಾರವನ್ನು ಶೇ. 10 ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಶೇ. 40 ಕಮಿಷನ್ ಪಡೆಯುತ್ತಿರುವುದು ಜನರಿಗೆ ಗೊತ್ತಿದೆ. ಭ್ರಷ್ಟಚಾರದ ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡಿದೆ'' ಎಂದು ತಿಳಿಸಿದರು.
'ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಕಾಂಕ್ಷೆ ವ್ಯಕ್ತಪಡಿಸುವುದನ್ನು ತಡೆಯಲಾಗದು. ಇವರ ಅಭಿಪ್ರಾಯಗೋಸ್ಕರ ಕಾಂಗ್ರೆಸ್ ಸಂಪ್ರದಾಯ ಬದಲಾಗುವುದಿಲ್ಲ. ಚುನಾವಣೆ ಆದ ನಂತರ ಕೇಂದ್ರದಿಂದ ವೀಕ್ಷಕರು ಬರುತ್ತಾರೆ. ಶಾಸಕರ ಅಭಿಪ್ರಾಯ ಪಡೆದು ಸಿಎಲ್‍ಪಿ ನಾಯಕನನ್ನು ಆಯ್ಕೆ ಮಾಡುತ್ತಾರೆ' ಎಂದರು.







