ರಾಜ್ಯಪಾಲರದ್ದು ಬಿಜೆಪಿ ಸರಕಾರದ ಬೀಳ್ಕೊಡುಗೆ ಭಾಷಣ: ಯು.ಟಿ.ಖಾದರ್ ಟೀಕೆ
''ಡಬಲ್ ಎಂಜಿನ್ ಸರ್ಕಾರದ ಇಂಧನವೇ ಕೋಮುವಾದ''

ಬೆಂಗಳೂರು, ಫೆ.15: ರಾಜ್ಯಪಾಲರು ಮಾಡಿರುವ ಭಾಷಣ ಅತ್ಯಂತ ನಿರಾಶಾದಾಯಕವಾಗಿದೆ. ಈ ಭಾಷಣದಲ್ಲಿ ಸರಕಾರದ ಹಿಂದಿನ ಸಾಧನೆಗಳು ಅಥವಾ ಮುಂದಿನ ಗುರಿಗಳ ಬಗ್ಗೆ ಉಲ್ಲೇಖವೇ ಇಲ್ಲ. ಇದೊಂದು ರೀತಿ ಬಿಜೆಪಿ ಸರಕಾರದ ಬೀಳ್ಕೊಡುಗೆ ಭಾಷಣವಿದ್ದಂತೆ ಇದೆ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಟೀಕಿಸಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ತನ್ನ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಜನತೆಯ ಮುಂದೆ ಹೋಗುವುದಾಗಿ ಹೇಳಿದೆ. ಆದರೆ, ಇವರಿಗೆ ಕಳೆದ ವರ್ಷ ಪರೀಕ್ಷೆ ಬರೆದಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ಮಾರ್ಕ್ಸ್ ಕಾರ್ಡ್ ನೀಡಲು ಸಾಧ್ಯವಾಗಿಲ್ಲ ಎಂದು ಕಿಡಿಗಾರಿದರು.
ಬಿಪಿಎಲ್ ಕಾರ್ಡ್, ತಾಯಿ ಕಾರ್ಡ್ ನೀಡಿಲ್ಲ. ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಇವರ ರಿಪೋರ್ಟ್ ಕಾರ್ಡ್ ಗೆ ಶೂನ್ಯ ಅಂಕ ನೀಡಲಿದ್ದಾರೆ. ರಾಜ್ಯಪಾಲರ ಭಾಷಣವನ್ನು ಅನುಮೋದಿಸಿ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ ಭಾಷಣವು ಚುನಾವಣಾ ಭಾಷಣದಂತಿತ್ತು. ಯಡಿಯೂರಪ್ಪ ಪರಿಶ್ರಮದಿಂದ ಶಾಸಕರು, ರಾಜ್ಯಮಟ್ಟದ ನಾಯಕರಾದವರು, ಕೇಂದ್ರ ನಾಯಕರ ಕಿವಿ ಊದಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ ಕಾರ್ಯಕ್ರಮ ಮಾಡಲು ಬಿಡದೆ, ಕಣ್ಣೀರು ಹಾಕಿಸಿ ರಾಜೀನಾಮೆ ಕೊಡಿಸಿದರು ಎಂದು ಅವರು ಹೇಳಿದರು.
ಡಬಲ್ ಎಂಜಿನ್ ಸರಕಾರವು ಜನ ಸಾಮಾನ್ಯರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸುವಾಗ ಎಂಜಿನ್ ಆಫ್ ಆಗುತ್ತದೆ. ಈ ಡಬಲ್ ಎಂಜಿನ್ ಸರಕಾರಕ್ಕೆ ಇಂಧನವೇ ಕೋಮುವಾದ, ಸೈಲೆನ್ಸರ್‌ನಿಂದ ಹೊರಗೆ ಬರುವುದು ವಿಷಕಾರಿ ಹೊಗೆ, ಅದನ್ನು ಸೇವಿಸಿ ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ಖಾದರ್ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ನಮ್ಮ ನೆರೆಹೊರೆಯ ರಾಜ್ಯಗಳು ಕೇಂದ್ರದ ನೆರವಿನಿಂದ ಆ್ಯಂಬುಲೆನ್ಸ್ ಗಳನ್ನು ಪಡೆದುಕೊಂಡರು. ಆದರೆ, ನಮ್ಮ ರಾಜ್ಯ ಸರಕಾರ ಒಂದು ಆ್ಯಂಬುಲೆನ್ಸ್ ಪಡೆದುಕೊಳ್ಳದಿರಲು ಕಾರಣವೇನು? ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿನ ಅವ್ಯವಹಾರ ತನಿಖೆಗೆ ಸದನ ಸಮಿತಿ ರಚಿಸಲಾಗಿದೆ. ಇನ್ನು ಒಂದೆರೆಡು ವರ್ಷಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿರುವ ಆಕ್ಸಿಜನ್ ಘಟಕಗಳ ಕುರಿತು ಸದನ ಸಮಿತಿ ರಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿಘಾಟ್ ರಸ್ತೆಯನ್ನು ದುರಸ್ತಿ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಶಿರಾಡಿಘಾಟ್ ರಸ್ತೆ ಅಭಿವೃದ್ಧಿಗೆ ನಿತಿನ್ ಗಡ್ಕರಿ 11 ಸಾವಿರ ಕೋಟಿ ರೂ.ಕೊಡಲಿದ್ದಾರೆ ಎಂದು ಪತ್ರ ಬರೆದಿದ್ದಾರೆ ಎಂದರು. ಆದರೆ, ಕೇಂದ್ರದ ಬಜೆಟ್‌ನಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ನಾವು ಶಿರಾಡಿಘಾಟ್ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ ಎಂದು ಖಾದರ್ ತಿಳಿಸಿದರು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದರು. ಆದರೆ, ಗೋ ಸಂತತಿ ಹೆಚ್ಚಿಸಲು ಯಾವುದೆ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆದಿಲ್ಲ. ಪಶು ಸಂಜೀವಿನಿ ಆ್ಯಂಬುಲೆನ್ಸ್ ಖರೀದಿಸಿದ್ದಾರೆ. ಅದಕ್ಕೆ ಬೇಕಿರುವ ಚಾಲಕರು, ಸ್ಟಾಫ್ ನರ್ಸ್ಗಳ ನೇಮಕ ಆಗಿಲ್ಲ. ಶಿಕ್ಷಕರು, ಎನ್‌ಪಿಎಸ್, ಒಪಿಎಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ನೌಕರರು, ಗ್ರಾಮ ಸಹಾಯಕರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅವರನ್ನು ಕರೆದು ಮಾತನಾಡಿಸುವ ಸೌಜನ್ಯವನ್ನು ಸರಕಾರ ತೋರುತ್ತಿಲ್ಲ ಎಂದು ಅವರು ಟೀಕಿಸಿದರು.
ನಮ್ಮ ಸರಕಾರ ರಾಣಿ ಅಬ್ಬಕ್ಕ ಉತ್ಸವಕ್ಕೆ 50 ಲಕ್ಷ ರೂ.ಗಳನ್ನು ನೀಡಿತ್ತು. ಈ ಸರಕಾರ ಬಂದು ಅಬ್ಬಕ್ಕ ಉತ್ಸವಕ್ಕೆ 10 ಲಕ್ಷ ರೂ.ಇಟ್ಟಿದೆ. ತುಳು, ಕೊಂಕಣಿ ಭಾಷೆಗೆ ಅನುದಾನ ನೀಡಬೇಕು. ತುಳು ಭಾಷೆಗೆ ಎರಡನೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಎಂದ ಅವರು, ತುಳು ಭಾಷೆಯ ಕುರಿತು ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಿರುವುದು ತುಳು ಭಾಷೆಗೆ ಮಾಡಿದ ಅವಮಾನ ಎಂದು ಕಿಡಿಗಾರಿದರು.
'ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಗೆ ಹೋಗಬೇಡಿ. ನಿಮ್ಮ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸಿ' ಎಂದು ಯು.ಟಿ.ಖಾದರ್ ಹೇಳಿದರು.







