ಶಾಸಕ ವೇದವ್ಯಾಸ ಕಾಮತ್‌ರ ಅಭಿನಂದನಾ ಪ್ರಚಾರ ಫ್ಲೆಕ್ಸ್‌ಗಳ ತೆರವಿಗೆ ಸಿಪಿಎಂ ಒತ್ತಾಯ

ಮಂಗಳೂರು: ನಗರದಾದ್ಯಂತ ಸರಕಾರಿ ಅನುದಾನದ ಕಾಮಗಾರಿಗಳಿಗೆ, ಆಟೊ ರಿಕ್ಷಾ ನಿಲ್ದಾಣಗಳಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತರ ಅಭಿನಂಧನಾ ಪ್ರಚಾರ ಪ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಿರುವುದು ನಿಯಮಬಾಹಿರವಾಗಿದೆ. ಹಾಗಾಗಿ ಇಂತಹ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿದೆ.
ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ, ಆಟೊ ರಿಕ್ಷಾ ನಿಲ್ದಾಣಗಳಿಗೆ ಶಾಸಕ ವೇದವ್ಯಾಸ ಕಾಮತರ ಮತ್ತು ಸ್ಥಳೀಯ ಕಾರ್ಪೊರೇಟರ್‌ಗಳ ಪೋಟೋಗಳುಳ್ಳ ಅನಧಿಕೃತ ಪ್ರಚಾರ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ಜನರ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಿಂದ ನಡೆಯುವ ಸರಕಾರಿ ಅನುದಾನದ ಕಾಮಗಾರಿಗಳಿಗೆ ತಮ್ಮದೇ ಕೊಡುಗೆ ಅನ್ನುವ ರೀತಿಯಲ್ಲಿ ಪುಕ್ಕಟೆ ಪ್ರಚಾರಗಿಟ್ಟಿಸುವ ಶಾಸಕರ ರಾಜಕೀಯ ನಡೆ ಅತ್ಯಂತ ಕೀಳುಮಟ್ಟದ್ದಾಗಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಶಾಸಕ ಕಾಮತರ ಪಾತ್ರ ದೊಡ್ಡದಿದೆ ಎಂಬ ಆರೋಪಗಳು ಜನಸಾಮಾನ್ಯರ ನಡುವೆ ಕೇಳಿಬರುತ್ತಿದೆ. ಶಾಸಕರು ಜನರ ಬದುಕಿಗೆ ಸಂಬಂಧಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಅಥವಾ ಯೋಜನೆಗಳನ್ನು ರೂಪಿಸುವಲ್ಲಿ ಒಂದೇ ಒಂದು ಪ್ರಶ್ನೆಯನ್ನು ವಿಧಾನಸೌಧದಲ್ಲಿ ಈವರೆಗೂ ಎತ್ತಲೇ ಇಲ್ಲ. ಕೇವಲ ಇಲ್ಲಿನ ಸಣ್ಣ ಪುಟ್ಟ ರಸ್ತೆ, ಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆಗೆ, ಉದ್ಘಾಟನೆಗಳಿಗೆ ತೆರಳಿದ ಫೋಟೋಗಳನ್ನು ಹಿಂಬಾಲಕರ ಮೂಲಕ ಅಲ್ಲಲ್ಲಿ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳಪಡಿಸುತ್ತಿರುವ ಕಾಯಕದಲ್ಲೇ ತೊಡಗಿಸಿಕೊಂಡು ತಿರುಗಾಡುತ್ತಿರುವುದು ವಿಪರ್ಯಾಸ. ಸರಕಾರಿ ವೆಚ್ಚದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದ ಫ್ಲೆಕ್ಸ್‌ಗಳು, ಅಭಿನಂಧನಾ ಬ್ಯಾನರ್ ಗಳು ಕಂಡುಬಂದರೆ ಅವುಗಳನ್ನು ತೆರವುಗೊಳಿಸಬೇಕು ಅಥವಾ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಈಗಾಗಲೇ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ. ಆದಾಗ್ಯೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಹೈಕೋರ್ಟ್‌ನ ಸೂಚನೆ ಪಾಲಿಸದೆ ನ್ಯಾಯಾಲಯ ನಿಂದನೆ ಮಾಡಿದೆ ಎಂದು ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.