ಶಾಸ್ತ್ರೀಯ ಕೇಂದ್ರ ಮೈಸೂರಿನಲ್ಲಿಯೇ ಉಳಿಯುವುದಕ್ಕೆ ಸಿದ್ದರಾಮಯ್ಯ ಕಾರಣ, ಸಿ.ಟಿ.ರವಿ ಅಲ್ಲ: ಸಾಹಿತಿ ಅರವಿಂದ ಮಾಲಗತ್ತಿ

ಮೈಸೂರು,ಫೆ.15: 'ಶಾಸ್ತ್ರೀಯ ಕೇಂದ್ರ ಮೈಸೂರಿನಲ್ಲಿಯೇ ಉಳಿಯುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ' ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದ್ದಾರೆ.
ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರ ಮೈಸೂರಿನಲ್ಲಿ ಉಳಿಸಿದ್ದು ಸಿ.ಟಿ.ರವಿ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆ ಸಂಬಂಧ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಉಮಾಶ್ರೀ ಅವರು ಸಚಿವರಾಗಿದ್ದಾಗ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಗಿ ಕೈ ಬಿಡಲಾಯಿತು. ಕೇಂದ್ರವನ್ನು ಮೈಸೂರಿನಲ್ಲಿಯೇ ಉಳಿಸಿಕೊಳ್ಳಲು ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಲು ನಿರ್ಧರಿಸಲಾಯಿತು. ಪ.ಮಲ್ಲೇಶ್, ಡಾ. ಪ್ರೀತಿ ಶುಭಚಂದ್ರ , ಡಾ.ಎನ್.ಎಸ್.ತಾರಾನಾಥ್ , ಡಾ.ನೀಲಗಿರಿ ತಳವಾರ್, ಜನಾರ್ದನ್ (ಜನ್ನಿ) ಮತ್ತು ನಾನು ಸೇರಿ ಹೋಗಿ ಮನವಿ ಮಾಡಿದ್ದೆವು.
ಸಿದ್ದರಾಮಯ್ಯ ಅವರು ಸರಿಯಾಗಿ ಕೆಲಸಗಳೇ ಆಗುತ್ತಿಲ್ಲ ಎಂದ ಮೇಲೆ, ಅದು ಮೈಸೂರಿನಲ್ಲಿಯೇ ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದರು.
'ಆ ಕೇಂದ್ರದ ಸಂಶೋಧನೆಗೆ ಸಂಬಂಧಿಸಿದಂತೆ ಹಳೆಗನ್ನಡದ ಹಾಗೂ ಸಂಸ್ಕೃತದ ತಾಡೋಲೆಯ ದೊಡ್ಡ ಗ್ರಂಥಾಲಯಗಳು ಇರುವುದು ಮೈಸೂರಿನಲ್ಲಿ ಮಾತ್ರ. ಬೆಂಗಳೂರಿನಲ್ಲಿ ಇಲ್ಲ. ಸಂಶೋಧನೆಯ ಆಕರಗಳು ಒಂದು ಕಡೆ, ಸಂಶೋಧಕರು ಇನ್ನೊಂದು ಕಡೆ ಆದರೆ ಕೆಲಸಗಳು ಮತ್ತಷ್ಟು ಕುಂಠಿತವಾಗುತ್ತವೆ. ಸಂಸ್ಥೆಯ ಹಿತದೃಷ್ಟಿಯಿಂದ ಅದು ಮೈಸೂರಿನಲ್ಲಿ ಇರುವ ಅಗತ್ಯವಿದೆ-ಎಂದು ವಿವರಿಸಿದ್ದೆವು. ಆಗ ತಕ್ಷಣವೇ ಸಂಬಂಧಪಟ್ಟವರಿಗೆ ಕರೆದು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಉಮಾಶ್ರೀ ಅವರನ್ನು ಭೇಟಿಯಾಗಿ ಚರ್ಚಿಸಲು ತಿಳಿಸುವುದರೊಂದಿಗೆ; ಬೆಂಗಳೂರಿಗೆ ವರ್ಗಾಯಿಸದಂತೆ ಹೇಳುವುದಾಗಿ ತಿಳಿಸುವುದರೊಂದಿಗೆ ಹಾಗೆಯೇ ಮಾಡಿದರು' ಎಂದು ಸ್ಮರಿಸಿದ್ದಾರೆ.







