ಬಿಸಿಯೂಟ ನೌಕರರ ಅಹವಾಲು ಸ್ವೀಕರಿಸದ ಸರಕಾರ; ವಿಧಾನಸೌಧ ಮುತ್ತಿಗೆಗೆ ಮುಂದಾದ ನೌಕರರು ಪೊಲೀಸರ ವಶಕ್ಕೆ

ಬೆಂಗಳೂರು, ಫೆ.15: ಒಂದು ಲಕ್ಷ ರೂ.ಹಿಡುಗಂಟು ಹಾಗೂ ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಾವಿರಾರು ಬಿಸಿಯೂಟ ನೌಕರರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದರು
ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ಸರಕಾರದ ಗಮನ ಸೆಳೆಯಲು ನಗರದ ಫ್ರೀಡಂ ಪಾರ್ಕ್‍ನಲ್ಲಿ ನಾಲ್ಕು ದಿನಗಳಿಂದ ನೌಕರರು ಧರಣಿ ಕೈಗೊಂಡಿದ್ದಾರೆ. ಸರಕಾರ ವಯಸ್ಸಿನ ಕಾರಣ ನೀಡಿ, ಈ ಹಿಂದೆ 6 ಸಾವಿರಕ್ಕೂ ಹೆಚ್ಚು ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಮುಂದಿನ ಜೂನ್‍ನಲ್ಲಿ 3ಸಾವಿರ ನೌಕರರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ನೌಕರರು 25 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಆದರೆ, ಈ ನೌಕರರಿಗೆ ಸರಕಾರದಿಂದ ಪಿಂಚಣಿ ಸೇರಿದಂತೆ ಇತರೆ ಯಾವುದೇ ಸೌಲಭ್ಯ ನೀಡಿಲ್ಲ.
ಆದುದರಿಂದ ಬಿಡುಗಡೆಯಾದ ಬಿಸಿಯೂಟ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸಿ, ಒಂದು ಲಕ್ಷ ರೂಪಾಯಿ ಹಿಡುಗಂಟು ನೀಡಬೇಕು. ನಿವೃತ್ತಿಯಾದವರಿಗೆ ಪಿಂಚಣಿ ನೀಡಬೇಕು. ಹಾಲಿ ಮುಖ್ಯ ಅಡುಗೆ ಮಾಡುವವರಿಗೆ 6ಸಾವಿರ ರೂ.ಮತ್ತು ಅಡುಗೆ ಸಹಾಯಕಿಯರಿಗೆ 5ಸಾವಿರ ರೂ. ಸಂಬಳ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಫ್ರೀಡಂ ಪಾರ್ಕ್‍ನಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ನೌಕರರು, ತಮ್ಮ ಬೇಡಿಕೆ ಈಡೇರಿಕೆಗೆ ಬುಧವಾರ ಮಧ್ಯಾಹ್ನ 12 ಗಂಟೆವರೆಗೆ ಗಡುವು ನೀಡಿದ್ದರು. ಆದರೂ ಶಿಕ್ಷಣ ಸಚಿವರು, ಇಲಾಖೆ ಕಾರ್ಯದರ್ಶಿ ಸ್ಥಳಕ್ಕೆ ಬಂದು ಅಹವಾಲು ಆಲಿಸದ ಕಾರಣ ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷೆ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಕೊಪ್ಪಳದ ಬಿಸಿಯೂಟ ನೌಕರರಾದ ಮಹಾದೇವಿ ಮಾತನಾಡಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರೆ ಸ್ಪಂದಿಸದ ಸರಕಾರ ಪ್ರತಿಭಟನಾಕಾರರನ್ನು ಬಂಧಿಸಿದೆ. ಇಂತಹ ಜೀವವಿರೋಧಿ, ನಾಲಾಯಕ್ ಸರಕಾರ ನಮಗೆ ಬೇಡ, ಮುಂದಿನ ದಿನಗಳಲ್ಲಿ ಬಿಸಿಯೂಟದ ಹೆಣ್ಣು ಮಕ್ಕಳು ತಕ್ಕ ಪಾಠ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







