ಕರಾವಳಿ ಮೀನುಗಾರರ ಮೇಲಿನ ಹಲ್ಲೆ: ಗಂಭೀರವಾಗಿ ಪರಿಗಣಿಸಲು ಸಿಎಂಗೆ ಪ್ರಮೋದ್ ಮಧ್ವರಾಜ್ ಮನವಿ

ಉಡುಪಿ: ಕರಾವಳಿ ಕರ್ನಾಟಕದ ಮೀನುಗಾರರ ಮೇಲೆ ಅನ್ಯ ರಾಜ್ಯದ ಮೀನುಗಾರರು ನಡೆಸುತ್ತಿರುವ ಹಲ್ಲೆ ಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಫೆ.೮ರಂದು ಕನ್ಯಾಕುಮಾರಿಯಿಂದ ಸುಮಾರು ೫೦ ನಾಟಿಕಲ್ ಮೈಲು ದೂರದಲ್ಲಿ ಕರ್ನಾಟಕದ ಆಳ ಸಮುದ್ರ ದೋಣಿಗಳು ಮೀನುಗಾರಿಕೆ ಮಾಡುತ್ತಿರುವಾಗ ಅನ್ಯ ರಾಜ್ಯದ ಬೋಟುಗಳು ಬಂದು ನಮ್ಮ ಕರ್ನಾಟಕದ ದೋಣಿಗಳನ್ನು ಸುತ್ತುವರಿದು ಸೀಸ, ಕಲ್ಲು, ಮರದ ತುಂಡುಗಳಿಂದ ಜಖಂಗೊಳಿಸಿ, ರಾಜ್ಯದ ಮೀನುಗಾರರ ಮೇಲೆ ಹಲ್ಲೆ ನಡೆಸಿ, ಬೋಟಿನಲ್ಲಿದ್ದ ಲಕ್ಷಾಂತರ ರೂ.ಮೌಲ್ಯದ ಮೀನುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಈಗಾಗಲೇ ಆಳಸಮುದ್ರ ಮೀನುಗಾರರ ಸಮಿತಿಗಳು ಹಾಗೂ ಸಂಘಗಳು ಅಮಾನವೀಯ ಕೃತ್ಯವನ್ನು ಉಗ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಹಾಗೂ ಸಚಿವರಿಗೆ ಮನವಿ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.ಆದ್ದರಿಂದ ತಾವು ತಪ್ಪಿತಸ್ಥರಿಂದ ಕರ್ನಾಟಕದ ಮೀನುಗಾರರಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪರಿಹಾರ ಹಾಗೂ ಆರ್ಥಿಕ ನಷ್ಟವನ್ನು ಭರಿಸುವಂತೆ ಮತ್ತು ಮುಂದಿನ ದಿನಗಳಲ್ಲಿ ರಾಜ್ಯ ಕರಾವಳಿಯ ಮೀನುಗಾರರಿಗೆ ಸೂಕ್ತ ಭದ್ರತೆಯನ್ನು ನೀಡಿ ಇಂಥಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.