ಮಂಗಳೂರು: ಅಪಘಾತದಲ್ಲಿ ಬೈಕ್ ಸವಾರ ಮೃತ್ಯು ಪ್ರಕರಣ; ಬಸ್ ಚಾಲಕನಿಗೆ ಶಿಕ್ಷೆ

ಮಂಗಳೂರು: ನಗರ ಹೊರವಲಯದ ಕೂಳೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಆರೋಪಿ ಬಸ್ ಚಾಲಕ ಸೀತಾರಾಮನಿಗೆ ಎರಡನೇ ಜೆಎಂಎಫ್‌ಸಿ ನ್ಯಾಯಾಲಯವು 6 ತಿಂಗಳ ಸಾದಾ ಶಿಕ್ಷೆ ಮತ್ತು 6000 ರೂ. ದಂಡ ವಿಧಿಸಿ ಆದೇಶಿಸಿದೆ.
ಮಂಗಳೂರು-ಉಡುಪಿ ರಾ.ಹೆ.೬೬ರ ಕೂಳೂರು ಸೇತುವೆ ಬಳಿ 2020ರ ಡಿ.೪ರಂದು ಈ ಅಪಘಾತ ನಡೆದಿತ್ತು. ನಗರದಿಂದ ಸುರತ್ಕಲ್ ಕಡೆಗೆ ಸಂಚರಿಸುತ್ತಿದ್ದ ಬೈಕ್‌ಗೆ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಇದರಿಂದ ಬೈಕ್ ಸವಾರ ಅಹ್ಮದ್ ಕಬೀರ್ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಬೈಕ್ ಸವಾರ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಧೀಶೆ ಅಂಜಲಿ ಶರ್ಮಾ ಸಾಕ್ಷಿಗಳ ಹೇಳಿಕೆ ಆಧರಿಸಿ ಆರೋಪಿಗೆ 6 ತಿಂಗಳ ಸಾದಾ ಶಿಕ್ಷೆ ಹಾಗೂ 6 ಸಾವಿರ ರೂ. ದಂಡವನ್ನು ತೆರಲು ಆದೇಶಿದಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 100 ದಿನಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಅಭಿಯೋಜಕರಾದ ಗೀತಾ ರೈ ವಾದಿಸಿದ್ದರು.







