30 ದೇಶಗಳ ಚುನಾವಣೆಯಲ್ಲಿ ಪ್ರಭಾವ ಬೀರಲು ಇಸ್ರೇಲ್ ಸಂಸ್ಥೆಯ ಯತ್ನ: ಕುಟುಕು ಕಾರ್ಯಾಚರಣೆಯ ವರದಿ

ಪ್ಯಾರಿಸ್, ಫೆ.15: ಇಸ್ರೇಲ್ ನ ಸಂಸ್ಥೆಯೊಂದು ಹ್ಯಾಕಿಂಗ್, ವಿಧ್ವಂಸಕ ಕೃತ್ಯ ಮತ್ತು ಗ್ರಾಹಕರಲ್ಲಿ ತಪ್ಪುಮಾಹಿತಿ ಹರಡುವ ಮೂಲಕ ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂದು ಬುಧವಾರ ಪ್ರಕಟವಾದ ರಹಸ್ಯ ಮಾಧ್ಯಮ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಪಂಚದಾದ್ಯಂತ ಕೆಲವು ಅಕ್ರಮ ಖಾಸಗಿ ಸಂಸ್ಥೆಗಳು ಆಕ್ರಮಣಕಾರಿ ಹ್ಯಾಕಿಂಗ್ ಸಾಧನದ ಮೂಲಕ ಲಾಭ ಮಾಡಿಕೊಳ್ಳುತ್ತಿವೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯ ಶಕ್ತಿಯಿಂದ ಸಾರ್ವಜನಿಕ ಅಭಿಪ್ರಾಯದಲ್ಲಿ ಪ್ರಭಾವ ಬೀರುತ್ತಿವೆ ಎಂಬ ಹೆಚ್ಚುತ್ತಿರುವ ಆತಂಕಕ್ಕೆ ಈ ವರದಿ ಪೂರಕವಾಗಿದೆ.
ಇಸ್ರೇಲ್ ನ ವಿಶೇಷ ಕಾರ್ಯಾಚರಣಾ ತಂಡದ ಮಾಜಿ ಸದಸ್ಯ ಟಾಲ್ ಹನಾನ್ ನೇತೃತ್ವದ `ಟೀಮ್ ಜಾರ್ಜ್' ಎಂಬ ಕೋಡ್ವರ್ಡ್ ಹೊಂದಿರುವ ಸಂಸ್ಥೆಯ ವಿರುದ್ಧ ಪತ್ರಕರ್ತರ ತಂಡವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಫ್ರಾನ್ಸ್ ಮೂಲದ ಎನ್ಜಿಒ ಸಂಸ್ಥೆಯ ನಿರ್ದೇಶನದಂತೆ ಬ್ರಿಟನ್ ನ `ದಿ ಗಾರ್ಡಿಯನ್', ಫ್ರಾನ್ಸ್ ನ `ಲೆ ಮೋಂಡ್', ಜರ್ಮನಿಯ `ಡೆರ್ ಸ್ಪೀಗೆಲ್' ಸೇರಿದಂತೆ 30 ಸಂಸ್ಥೆಗಳ ಪತ್ರಕರ್ತರು ತನಿಖಾ ವರದಿ ತಂಡದಲ್ಲಿದ್ದರು. ತಾವು ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದು `ಟೀಮ್ ಜಾರ್ಜ್'ನ ಗ್ರಾಹಕರಾಗಲು ಇಚ್ಛೆಯಿದೆ ಎಂದು ಹೇಳಿಕೊಂಡ ಈ ತಂಡ ಕುಟುಕು ಕಾರ್ಯಾಚರಣೆ ನಡೆಸಿದೆ.
ಟೆಲಿಗ್ರಾಮ್ ಖಾತೆಗಳು ಹಾಗೂ ಸಾವಿರಾರು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ನಿಯಂತ್ರಿಸುವುದು, ಹೊಸ ವರದಿಗಳನ್ನು ಪ್ರಕಟಿಸುವುದು ಇವರ ಕಾರ್ಯವಿಧಾನವಾಗಿದೆ. `ಅಡ್ವಾನ್ಸ್ಡ್ ಇಂಪ್ಯಾಕ್ಟ್ ಮೀಡಿಯಾ ಸೊಲ್ಯುಷನ್ಸ್' ಎಂಬ ಸಾಫ್ಟ್ವೇರ್ ವೇದಿಕೆಯ ಮೂಲಕ ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಆನ್ಲೈನ್ ಅಭಿಯಾನ ನಡೆಸಲಾಗುತ್ತಿದೆ. ಈ ಸಾಫ್ಟ್ವೇರ್ ವೇದಿಕೆಯು ಫೇಸ್ಬುಕ್, ಟ್ವಿಟರ್ ಅಥವಾ ಲಿಂಕೆಡಿನ್ನ ಸುಮಾರು 40,000 ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ನಿಯಂತ್ರಿಸುತ್ತಿದೆ. ತಮ್ಮ ತಂಡವು ಫ್ರಾನ್ಸ್ ನ ಪ್ರಮುಖ ಟಿವಿ ನ್ಯೂಸ್ಚಾನೆಲ್ ಬಿಎಫ್ಎಮ್ ನಲ್ಲಿ `ಮೊನಾಕೊದಲ್ಲಿ ವಿಹಾರ ಉದ್ದಿಮೆಯ ಮೇಲೆ ರಶ್ಯ ವಿರುದ್ಧದ ನಿರ್ಬಂಧದ ಪರಿಣಾಮ' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ ಎಂದು ಕುಟುಕು ಕಾರ್ಯಾಚರಣೆಯ ಸಂದರ್ಭ ಹನಾನ್ ಹೇಳಿಕೊಂಡಿದ್ದಾರೆ.
ತಮ್ಮ ಸಂಸ್ಥೆಯು ಗುಪ್ತಚರ ಏಜೆನ್ಸಿಗಳಿಗೆ, ರಾಜಕೀಯ ಅಭಿಯಾನಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗಾಗಿ ಪ್ರತ್ಯೇಕ ಮೂರು ವಿಧದ ಕಾರ್ಯನಿರ್ವಹಿಸುತ್ತದೆ. ಈಗ ಆಫ್ರಿಕಾದಲ್ಲಿನ ಚುನಾವಣೆಯಲ್ಲಿ ನಾವು ತೊಡಗಿಕೊಂಡಿದ್ದೇವೆ. ಎಮಿರೇಟ್ಸ್ ಮತ್ತು ಗ್ರೀಸ್ ನಲ್ಲಿಯೂ ನಮ್ಮ ತಂಡವಿದೆ. 33 ಅಧ್ಯಕ್ಷರ ಮಟ್ಟದ ಚುನಾವಣಾ ಅಭಿಯಾನವನ್ನು ನಾವು ಪೂರ್ಣಗೊಳಿಸಿದ್ದು ಇದರಲ್ಲಿ 27ರಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ರಾಜಕೀಯ ಅಭಿಯಾನದ 75%ದಷ್ಟು ಆಫ್ರಿಕಾಕ್ಕೆ ಸಂಬಂಧಿಸಿದ್ದು ಎಂದು ಹನಾನ್ ಹೇಳಿದ್ದಾರೆ.
ಅಲ್ಲದೆ ಕೆನ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮುಂಚಿನ ದಿನ ಅಲ್ಲಿನ ರಾಜಕೀಯ ಕಾರ್ಯಕರ್ತರ ಜಿಮೇಲ್ ಇನ್ಬಾಕ್ಸ್ ಹಾಗೂ ಟೆಲಿಗ್ರಾಮ್ ಖಾತೆಗಳನ್ನು ಯಾವ ರೀತಿ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದ್ದಾರೆ. ಆಗಸ್ಟ್ 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಕೆನ್ಯಾದ ಅಧ್ಯಕ್ಷ ವಿಲಿಯಮ್ ರುಟೋ ಅವರ ಇಬ್ಬರು ಸಹಾಯಕರ ಜಿಮೇಲ್ ಇದಾಗಿದೆ ಎಂದು ವರದಿ ಹೇಳಿದೆ.
ಟೀಮ್ ಜಾರ್ಜ್ ವಿವರಿಸಿದ ವಿಧಾನಗಳು ಮತ್ತು ತಂತ್ರಗಳು ದೊಡ್ಡ ಟೆಕ್ ವೇದಿಕೆಗಳಿಗೆ ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಜಾಗತಿಕ ಖಾಸಗಿ ಮಾರುಕಟ್ಟೆಯು ತಪ್ಪು ಮಾಹಿತಿ ಪ್ರಸಾರ ಮಾಡುತ್ತಿರುವುದು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವರದಿ ಹೇಳಿದೆ.







