ಸ್ಪಷ್ಟ ನಿರ್ಧಾರ ತಿಳಿಸದ ಚೀನಾ: ಶ್ರೀಲಂಕಾಕ್ಕೆ ಐಎಂಎಫ್ ಸಾಲ ಮಂಜೂರು ಅನಿಶ್ಚಿತತೆಯಲ್ಲಿ

ಕೊಲಂಬೊ, ಫೆ.15: ಶ್ರೀಲಂಕಾಕ್ಕೆ ನೀಡಿರುವ ಸಾಲದ ಮರುರಚನೆಯ ಬಗ್ಗೆ ಚೀನಾ ಇನ್ನೂ ಸ್ಪಷ್ಟ ನಿರ್ಧಾರ ತಿಳಿಸದ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರಕ್ಕೆ ಐಎಂಎಫ್(IMF) ಸಾಲ ಮಂಜೂರಾತಿಯ ಕುರಿತ ಅನಿಶ್ಚಿತತೆ ಮುಂದುವರಿದಿದೆ ಎಂದು ವರದಿಯಾಗಿದೆ.
ಶ್ರೀಲಂಕಾಕ್ಕೆ ಸಾಲ ನೀಡಿರುವ ನೆರೆಹೊರೆಯ ಪ್ರಮುಖ ದೇಶಗಳಾದ ಚೀನಾ, ಭಾರತ ಮತ್ತು ಜಪಾನ್ನಿಂದ `ಸಾಲದ ಸಮರ್ಥನೀಯತೆಯ ವಿಶ್ಲೇಷಣಾ ವರದಿ(DSA)'ಯನ್ನು ಐಎಂಎಫ್ ಕೇಳಿದೆ. ಈ ದೇಶಗಳು ನೀಡುವ ಡಿಎಸ್ಎ ಆಧಾರದ ಮೇಲೆ ಶ್ರೀಲಂಕಾಕ್ಕೆ ಸಾಲ ನೀಡಬೇಕೇ, ಎಷ್ಟು ಮೊತ್ತ ನೀಡಬಹುದು ಇತ್ಯಾದಿಗಳನ್ನು ಐಎಂಎಫ್ ನಿರ್ಧರಿಸಲಿದೆ.
ಭಾರತ ಮತ್ತು ಜಪಾನ್ ಈಗಾಗಲೇ ಶ್ರೀಲಂಕಾಕ್ಕೆ ನೆರವು ನೀಡುವುದಾಗಿ ಐಎಂಎಫ್ಗೆ ಖಾತರಿ ಒದಗಿಸಿವೆ. ಆದರೆ ಚೀನಾ ಮಾತ್ರ ಹಿಂದೇಟು ಹಾಕುತ್ತಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಲಂಕಾ, ಐಎಂಎಫ್ನಿಂದ 4 ವರ್ಷಾವಧಿಗೆ, 8 ಕಂತುಗಳಲ್ಲಿ 2.9 ಶತಕೋಟಿ ಡಾಲರ್ನಷ್ಟು ಸಾಲದ ನೆರವನ್ನು ಎದುರುನೋಡುತ್ತಿದೆ.
ಸಾಲದ ಕಂತಿನ ಅವಧಿ ಮತ್ತು ಸಾಲದ ಮರುರಚನೆಯ ವಿಷಯದಲ್ಲಿ ಚೀನಾವು ಐಎಂಎಫ್ ಜತೆ ಭಿನ್ನಾಭಿಪ್ರಾಯ ಹೊಂದಿದೆ. ಶ್ರೀಲಂಕಾಕ್ಕೆ ತಾನು ನೀಡಿರುವ ಸಾಲವನ್ನು 2 ವರ್ಷದ ಅವಧಿಗೆ ಮರುರಚಿಸಲು ಸಿದ್ಧ ಎಂದು ಚೀನಾ ವಾದಿಸುತ್ತಿದೆ. ಆದರೆ ಐಎಂಎಫ್ 4 ವರ್ಷದ ಅವಧಿಗೆ ಆಗ್ರಹಿಸುತ್ತಿದೆ. ಮುಂದಿನ ತಿಂಗಳು ನಿಗಧಿಯಾಗಿರುವ ಐಎಂಎಫ್ ಕಾರ್ಯಕಾರಿ ಸಮಿತಿಯ ಸಭೆಗೂ ಮುನ್ನ ಚೀನಾ ಅನುಕೂಲಕರ ನಿರ್ಧಾರಕ್ಕೆ ಬರಬಹುದು ಎಂದು ಶ್ರೀಲಂಕಾ ನಿರೀಕ್ಷಿಸುತ್ತಿದೆ.
ಶ್ರೀಲಂಕಾವು ಸುಮಾರು 7.8 ಶತಕೋಟಿ ಡಾಲರ್ನಷ್ಟು (ಚೀನಾ ಸರಕಾರದಿಂದ ಪಡೆದ ದ್ವಿಪಕ್ಷೀಯ ಸಾಲ, ಎಕ್ಸಿಮ್ ಬ್ಯಾಂಕ್ನಿಂದ ಮತ್ತು ಚೀನೀ ಅಭಿವೃದ್ಧಿ ಬ್ಯಾಂಕ್ನಿಂದ ಪಡೆದ ಸಾಲ ಸೇರಿ) ಸಾಲವನ್ನು ಚೀನಾಕ್ಕೆ ಪಾವತಿಸಬೇಕಿದೆ. ಗೊತಬಯ ಅಧ್ಯಕ್ಷರಾಗಿದ್ದ ಸಂದರ್ಭ ಪಡೆದಿದ್ದ ಈ ಸಾಲವನ್ನು ಹಂಬನ್ತೋಟ ಬಂದರು, ಮತ್ತಾಲ ವಿಮಾನನಿಲ್ದಾಣ ನವೀಕರಣ, ನೊರೊಚೊಲೈ ವಿದ್ಯುತ್ಸ್ಥಾವರ, ಕೊಲಂಬೊ ಬಂದರು ನಗರ ನಿರ್ಮಾಣ ಮುಂತಾದ ಬಿಳಿಯಾನೆ ಯೋಜನೆಗಳಿಗೆ ವಿನಿಯೋಗಿಸಿರುವುದು ಶ್ರೀಲಂಕಾದ ಈಗಿನ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ.
ಶ್ರೀಲಂಕಾಕ್ಕೆ ಐಎಂಎಫ್ ಸಾಲದ ನೆರವು ಮುಂದೂಡಿಕೆಯಾದರೆ ಆ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಜತೆಗೆ ರಾಜಕೀಯ ಅಸ್ಥಿರತೆಯೂ ಪರಾಕಾಷ್ಟೆಗೆ ಏರಲಿದೆ. ಜನತಾ ವಿಮುಕ್ತಿ ಪೆರುಮುನ(JVP)ದಂತಹ ಶ್ರೀಲಂಕಾದ ಕಮ್ಯುನಿಸ್ಟ್ ಪಕ್ಷಗಳು ಈ ಪರಿಸ್ಥಿತಿಯ ಫಲಾನುಭವಿಗಳಾಗಲಿದ್ದಾರೆ. ಈ ಸಾಧ್ಯತೆಯನ್ನು ಮನಗಂಡಿರುವ ಚೀನಾ ಸಾಲ ಮರುರಚನೆಯ ನಿರ್ಧಾರವನ್ನು ಅನಿಶ್ಚಿತತೆಯಲ್ಲಿ ಇರಿಸಿದೆ ಎಂದು ವಿಶ್ಲೇಷಿಸಲಾಗಿದೆ.