ಅಲಾಸ್ಕದ ಬಳಿ ರಶ್ಯದ ಬಾಂಬರ್ ವಿಮಾನ ತಡೆಗಟ್ಟಿದ ಅಮೆರಿಕ

ವಾಷಿಂಗ್ಟನ್, ಫೆ.15: ಅಲಾಸ್ಕಾದ ಬಳಿ ಅಂತರಾಷ್ಟ್ರೀಯ ವಾಯುಪ್ರದೇಶದ ಮೂಲಕ ಸಂಚರಿಸುತ್ತಿದ್ದ ರಶ್ಯದ ಯುದ್ಧವಿಮಾನ, ಬಾಂಬರ್‌ಗಳ ಸಹಿತ ಯುದ್ಧ ವಿಮಾನಗಳನ್ನು ಅಮೆರಿಕದ ವಾಯುರಕ್ಷಣಾ ಪಡೆ ತಡೆಗಟ್ಟಿದೆ ಎಂದು ಅಮೆರಿಕದ ಸೇನೆ ಹೇಳಿದೆ.
ಫೆ.13ರಂದು ಈ ಘಟನೆ ನಡೆದಿದೆ. ಈ ವಿಮಾನಗಳು ಅಮೆರಿಕ ಅಥವಾ ಕೆನಡಾ ವಾಯುಪ್ರದೇಶವನ್ನು ಪ್ರವೇಶಿಸಿಲ್ಲ. ಅಥವಾ ಇತ್ತೀಚೆಗೆ ನಿರಂತರ ಪತ್ತೆಯಾದ ನಿಗೂಢ ವಸ್ತುಗಳಿಗೆ ಸಂಬಂಧಿಸಿದ್ದಲ್ಲ ಮತ್ತು ಯಾವುದೇ ಬೆದರಿಕೆ ಒಡ್ಡಿಲ್ಲ. ಆದರೆ, ಅಗತ್ಯವೆಂದು ಕಂಡುಬಂದರೆ ಅಲಾಸ್ಕಾದ ವಾಯುಪ್ರದೇಶ ಪ್ರವೇಶಿಸುವ ಯಾವುದೇ ವಿಮಾನವನ್ನು ತಡೆಗಟ್ಟಲು ನಾರ್ಥ್ ಅಮೆರಿಕನ್ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್(Norad) ನಿರ್ಧರಿಸಿದ ಪ್ರಕಾರ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಸೇನೆ ಹೇಳಿದೆ.
ತನ್ನ ಬಾಂಬರ್ ವಿಮಾನಕ್ಕೆ ಅಮೆರಿಕ ತಡೆಯೊಡ್ಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ರಶ್ಯ, ಅಲಾಸ್ಕಾ ಮತ್ತು ರಶ್ಯದ ನಡುವಿನ ಬೆರಿಂಗ್ ಸಮುದ್ರದ ಮೇಲಿನ ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ತನ್ನ ವಿಮಾನಗಳ ದೈನಂದಿನ ಹಾರಾಟ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದೆ.





