ಡಿ.ಕೆಂಪಣ್ಣ ವಿರುದ್ಧ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಸಮನ್ಸ್ ರದ್ದುಪಡಿಸಿದ ಸಿಟಿ ಸಿವಿಲ್ ಕೋರ್ಟ್
ಮಾನಹಾನಿ ದಾವೆ

ಬೆಂಗಳೂರು, ಫೆ.15: ಶೇ.40ರಷ್ಟು ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಸಚಿವ ವಿ.ಮುನಿರತ್ನ ಅವರು ಹೂಡಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ವಜಾ ಮಾಡಿದೆ.
ದೂರುದಾರ ಮುನಿರತ್ನ ಅವರು ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರ ಅನ್ವಯ ಸಮನ್ಸ್ ಜಾರಿ ಮಾಡಬೇಕಿತ್ತು. ಆದರೆ, ಈ ನಿಯಮ ಪಾಲನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಂಪಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿರುವುದನ್ನು ಕಾನೂನುಬಾಹಿರ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.
ಅಲ್ಲದೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ್ದ ಸಮನ್ಸ್ ಅನ್ನು ಬದಿಗೆ ಸರಿಸಲಾಗಿದ್ದು, ಈ ಕೇಸ್‍ನ್ನು ವಿಚಾರಣಾಧೀನ ಕೋರ್ಟ್‍ಗೆ ಮರಳಿಸಲಾಗಿದೆ.
ಪ್ರಕರಣವೇನು: "ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ" ಎಂದು ಆರೋಪಿಸಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಮತ್ತು ಸಂಘದ ಪದಾಧಿಕಾರಿಗಳ ವಿರುದ್ಧ ತೋಟಗಾರಿಕೆ ಸಚಿವ ಮುನಿರತ್ನ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಚಿತ್ರ ನಿರ್ಮಾಪಕರೂ ಆಗಿರುವ ಸಚಿವ ಮುನಿರತ್ನ, ಅರ್ಜಿಯಲ್ಲಿ "ಶ್ರೀ ಕೃಷ್ಣದೇವರಾಯ ಸಿನೆಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದೆ. ಪ್ರತಿವಾದಿಗಳಾದ ಕೆಂಪಣ್ಣ ಮತ್ತಿತರರು ಆರೋಪ ಮಾಡಿದ್ದರಿಂದ ಆ ಸಿನೆಮಾ ನಿರ್ಮಾಣ ನಡೆಯುವುದು ಅನುಮಾನವಾಗಿದೆ. ಗುತ್ತಿಗೆದಾರರ ಸಂಘದ ಆರೋಪದಿಂದ ಇತರೆ ರಾಜ್ಯಗಳಲ್ಲಿ ಸಿನೆಮಾ ಹಂಚಿಕೆಗೆ ಹಿಂಜರಿಯುತ್ತಿದ್ದಾರೆ.
ಐತಿಹಾಸಿಕ ಸಿನಿಮಾ ನಿರ್ಮಾಣಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಕಳೆದ ನಾಲ್ಕು ದಶಕಗಳಿಂದ ಗಳಿಸಿರುವ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ 50 ಕೋಟಿ ರೂಪಾಯಿ ಪರಿಹಾರ ನೀಡಬೇಕು" ಎಂದು ಕೋರಿದ್ದರು.
ಸಚಿವ ಮುನಿರತ್ನ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿ, ಉಪಾಧ್ಯಕ್ಷ ವಿ ಕೃಷ್ಣಾರೆಡ್ಡಿ, ಕೆ ಎಸ್ ಶಾಂತೇಗೌಡ, ಕೆ ರಾಧಾಕೃಷ್ಣ ನಾಯಕ್, ಆರ್ ಮಂಜುನಾಥ್, ಆರ್ ಅಂಬಿಕಾಪತಿ, ಬಿ ಸಿ ದಿನೇಶ್, ಸಿ ಡಿ ಕೃಷ್ಣ, ಕಾರ್ಯದರ್ಶಿ ಜಿ ಎಂ ರವೀಂದ್ರ, ಖಜಾಂಚಿ ಎಚ್ ಎಸ್ ನಟರಾಜ್, ಜಂಟಿ ಕಾರ್ಯದರ್ಶಿಗಳಾದ ಎಂ ರಮೇಶ್, ಎನ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ್ ಬಿ. ಶೆಗಜಿ, ಸುರೇಶ್ ಎಸ್ ಭೋಮರೆಡ್ಡಿ, ಕೆ ಎ ರವಿಚಂಗಪ್ಪ, ಬಿ ಎಸ್ ಗುರುಸಿದ್ದಪ್ಪ, ಕರ್ಲೆ ಇಂದ್ರೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.







