ಸೇವಾಲಾಲ್ ವಿಶ್ವಮಾನವರಾಗಿದ್ದರು: ಡಾ. ಕುಮಾರ ನಾಯ್ಕ

ಮಂಗಳೂರು: ಸೇವಾಲಾಲ್ ವಿಶ್ವಮಾನವರಾಗಿದ್ದರು. ಅವರು ೧೨ನೇ ಶತಮಾನದಲ್ಲಿ ಮೂಡಿಬಂದಿದ್ದ ಭಕ್ತಿ ಪಂಥ ಚಳುವಳಿಗಿಂತಲೂ ಅತ್ಯುತ್ತಮವಾದ ಸಂದೇಶವನ್ನು ಜಗತ್ತಿಗೆ ನೀಡಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪಶ್ಚಿಮ ವಲಯ ಜಾರಿ ವಿಭಾಗದ ಜಂಟಿ ಆಯುಕ್ತ ಡಾ. ಕುಮಾರ ನಾಯ್ಕ ಜಿ. ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರಾವಳಿ ಶ್ರೀ ಸೇವಾಲಾಲ್ ಬಂಜಾರ(ಲಂಬಾಣಿ) ಸಂಘದ(ರಿ) ಸಹಕಾರದೊಂದಿಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ, ಉಪನ್ಯಾಸ ನೀಡಿದರು.
ಭಕ್ತರ ಕಷ್ಟಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿದ್ದ ಸಂತ ಸೇವಾಲಾಲ್ ಅವರು ಪವಾಡ ಪುರುಷರೆಂದೇ ಖ್ಯಾತಿಗಳಿಸಿದವರು, ಅವರು ಬದುಕಿದ್ದ ಕಾಲಘಟ್ಟದಲ್ಲಿ ಬಂಜಾರ ಜನಾಂಗದ ಭಾಷೆಗೆ ಲಿಪಿಯ ಕೊರತೆ ಯಿಂದಾಗಿ ಅವರ ಪವಾಡಗಳು ಬೆಳಕಿಗೆ ಬರಲಿಲ್ಲ. ಲಿಪಿಯ ಕೊರತೆ, ಬಡತನ, ಶೈಕ್ಷಣಿಕವಾಗಿ ಹಿಂದುಳಿದ ಕಾರಣದಿಂದಾಗಿ ಬಂಜಾರ ಜನಾಂಗದ ಇತಿಹಾಸ , ಕಥೆಗಳನ್ನು ಬರೆದಿಡಲು ಸಾಧ್ಯವಾಗಿಲ್ಲ. ಶಿಕ್ಷಣ ಹಾಗೂ ಜಾಗೃತಿಯ ಮಹತ್ವವನ್ನು ಅರಿತಿದ್ದ ಅವರು, ಶಿಕ್ಷಣ ಪಡೆಯಿರಿ ಹಾಗೂ ಇತರರು ಶಿಕ್ಷಣ ಪಡೆಯಲು ಅನುಕೂಲ ಮಾಡಿ, ಅದರಿಂದ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದ್ದರು.
ಇವತ್ತು ಬಂಜಾರ ಜನಾಂಗದಲ್ಲಿ ಶಿಕ್ಷಣ ಪಡೆದವರು ಇರುವ ಕಾರಣ ಸಂತರ ಪವಾಡಗಳು ಜಗತ್ತಿಗೆ ತಿಳಿದಿವೆ, ಸೇವಾಲಾಲ್ ಅವರ ಆದರ್ಶಗಳು, ನುಡಿಮುತ್ತುಗಳನ್ನು ಪ್ರಚಾರ ಮಾಡಲಾಗುತ್ತಿದೆ, ಹಬ್ಬ, ಹರಿದಿನಗಳಲ್ಲಿ ಜನಾಂಗದ ಹೆಣ್ಣು ಮಕ್ಕಳು ಹಾಡುತ್ತಿದ್ದ ಹಾಡುಗಳಲ್ಲಿ, ಕಥೆಗಳಲ್ಲಿ ಜಾನಪದಗಳಲ್ಲಿ, ಪುರಾಣಗಳಲ್ಲಿ ಅವರ ಪವಾಡಗಳನ್ನು ತಿಳಿಯಲಾಗಿದೆ, ಸಂತ ಸೇವಾಲಾಲರು ನಿರ್ವಾಣವಾದ ದಿನದಿಂದಲೂ ಅವರು ಮಾಡುತ್ತಿದ್ದ ಪವಾಡಗಳ ಮಹತ್ವವನ್ನು ಕೇಳಲಾಗುತ್ತಿದೆ ಎಂದರು.
ಹುಟ್ಟಿನಿಂದಲೇ ವಿಶಿಷ್ಟಗುಣಗಳನ್ನು ಸೇವಾಲಾಲ್ ಮೈಗೂಡಿಸಿಕೊಂಡಿದ್ದರು.ನೀರಿಗೂ ದುಡ್ಡು ಕೊಡುವ ಕಾಲ ಬರಬಹುದು ಎಂದು ಹೇಳಿದ್ದರು. ಇವತ್ತು ಅವರ ಆ ಚಿಂತನೆಗಳು ನಿಜವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಶ್ರೀ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ರಾಜಪ್ಪ ಮಾತನಾಡಿದರು. ಕರಾವಳಿ ಶ್ರೀ ಸೇವಾಲಾಲ್ ಬಂಜಾರ ಸಂಘದ ಗೌರವ ಅಧ್ಯಕ್ಷ ಜಯಪ್ಪ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಗೀತಾ ಪ್ರದೀಪ್ ವಂದಿಸಿದರು. ಪ್ರದೀಪ್.ಡಿ.ಎಂ.ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.