ಇಮ್ರಾನ್ ಜಾಮೀನು ವಿಸ್ತರಣೆಗೆ ನಕಾರ; ಹಲವೆಡೆ ಘರ್ಷಣೆ

ಇಸ್ಲಮಾಬಾದ್, ಫೆ.15: ಚುನಾವಣಾ ಆಯೋಗದ ಎದುರು ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ವಿಸ್ತರಿಸಲು ಇಸ್ಲಮಾಬಾದ್ ನ ಎಟಿಸಿ ನ್ಯಾಯಾಲಯ ಬುಧವಾರ ತಿರಸ್ಕರಿದ ಬೆನ್ನಲ್ಲೇ ಪೊಲೀಸರು ಮತ್ತು ಇಮ್ರಾನ್ ಬೆಂಬಲಿಗರ ಮಧ್ಯೆ ಹಲವೆಡೆ ಘರ್ಷಣೆ ನಡೆದಿದೆ ಎಂದು ಡಾನ್ ವರದಿ ಮಾಡಿದೆ.
ತೋಷಖಾನ ಪ್ರಕರಣದಲ್ಲಿ ತನಗೆ ನೀಡಲಾಗಿದ್ದ ಜಾಮೀನನ್ನು ವಿಸ್ತರಿಸುವಂತೆ ಕೋರಿ ಇಮ್ರಾನ್ ಖಾನ್ ಅರ್ಜಿ ಸಲ್ಲಿಸಿದ್ದು ವಿಚಾರಣೆ ಸಂದರ್ಭ ಇಮ್ರಾನ್ ಅವರ ಲಾಯರ್ ನ್ಯಾಯಾಲಯಕ್ಕೆ ಆಗಮಿಸಿದ್ದು ಗುಂಡೇಟಿನಿಂದ ಗಾಯಗೊಂಡಿರುವ ಇಮ್ರಾನ್ ಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯತಿಗೆ ಕೋರಿದ್ದರು. ಆದರೆ ಇಮ್ರಾನ್ ವೈಯಕ್ತಿಕ ಹಾಜರಾತಿಗೆ ಸೂಚಿಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು ವಿಸ್ತರಣೆಗೆ ನಿರಾಕರಿಸಿದರು. ವೈದ್ಯಕೀಯ ಕಾರಣಗಳಿಗಾಗಿ ಇಮ್ರಾನ್ ಇದುವರೆಗೆ 10 ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಆದರೆ ತ್ವರಿತ ಅರ್ಜಿ ಪ್ರಕ್ರಿಯೆಯಲ್ಲಿ ಈ ವಿಷಯವನ್ನು ಅನಿರ್ಧಿಷ್ಟ ಅವಧಿಗೆ ಮುಂದುವರಿಸಲು ಸಾಧ್ಯವಿಲ್ಲದ ಕಾರಣ ಜಾಮೀನು ವಿಸ್ತರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ತೀರ್ಪು ಹೊರಬೀಳುತ್ತಿದ್ದಂತೆಯೇ ಇಸ್ಲಮಾಬಾದ್, ಪೇಷಾವರ ಮತ್ತು ಕರಾಚಿಯಲ್ಲಿ ಪೊಲೀಸರು ಮತ್ತು ಇಮ್ರಾನ್ಖಾನ್ ಬೆಂಬಲಿಗರ ಮಧ್ಯೆ ಘರ್ಷಣೆ ಭುಗಿಲೆದ್ದಿದೆ ಎಂದು ವರದಿಯಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ಇಮ್ರಾನ್, ಈ ತೀರ್ಪಿನ ವಿರುದ್ಧ ಇಸ್ಲಮಾಬಾದ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.





