ನ್ಯೂಝಿಲ್ಯಾಂಡ್: ಚಂಡಮಾರುತಕ್ಕೆ 4 ಮಂದಿ ಬಲಿ

ನೇಪಿಯರ್, ಫೆ.15: ನ್ಯೂಝಿಲ್ಯಾಂಡ್ ಗೆ ಬುಧವಾರ ಅಪ್ಪಳಿಸಿದ `ಗ್ಯಾಬ್ರಿಯೆಲ್' ಚಂಡಮಾರುತದ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ನೆರೆನೀರು ಕಟ್ಟಡದೊಳಗೆ ನುಗ್ಗಿದ್ದು 4 ಮಂದಿ ಮೃತಪಟ್ಟಿದ್ದಾರೆ. ಜಲಾವೃತಗೊಂಡ ಪ್ರದೇಶದಿಂದ 10 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ಹಾಕ್ಸ್‍ಬೇ ಪ್ರದೇಶದಲ್ಲಿ ಚಂಡಮಾರುತದಿಂದ ತೀವ್ರ ಹಾನಿಯಾಗಿದ್ದು ಮನೆಯೊಳಗೆ ನೆರೆನೀರು ನುಗ್ಗಿದೆ. ಜನರು ತಮ್ಮ ಸಾಕುಪ್ರಾಣಿಗಳ ಸಹಿತ ಮನೆಗಳ ಮಹಡಿಯಲ್ಲಿ ಆಶ್ರಯ ಪಡೆದಿದ್ದು ಅವರನ್ನು ರಕ್ಷಿಸುವ ಕಾರ್ಯಕ್ಕೆ ಸೇನೆಯ 3 ಹೆಲಿಕಾಪ್ಟರ್ಗಳನ್ನು ಬಳಸಲಾಗಿದೆ. ಕೆಲವೆಡೆ ಮನೆಯ 2ನೇ ಮಹಡಿಯವರೆಗೆ ನೆರೆನೀರು ನುಗ್ಗಿದೆ. ಹಲವು ಮನೆಗಳು ಕುಸಿದು ಬಿದ್ದಿದ್ದು ವಿದ್ಯುತ್ ವ್ಯವಸ್ಥೆ ಮೊಟಕುಗೊಂಡಿದೆ. ರಸ್ತೆ, ರೈಲು ಹಳಿಗಳಿಗೆ ಮರಗಳು ಉರುಳಿಬಿದ್ದಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. 4 ಮಂದಿಯ ಮೃತದೇಹ ಪತ್ತೆಯಾಗಿದ್ದು ಜಲಾವೃತಗೊಂಡಿರುವ ಮನೆಗಳಲ್ಲಿ ಹಲವರು ಸಿಲುಕಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ತುರ್ತುಪರಿಸ್ಥಿತಿ ನಿರ್ವಹಣಾ ಸಚಿವ ಕೀರನ್ ಮೆಕಾಲ್ಟಿ ಹೇಳಿದ್ದಾರೆ.
ಈ ಮಧ್ಯೆ, ವೆಲಿಂಗ್ಟನ್ ನ ವಾಯವ್ಯ ಪ್ರದೇಶದಲ್ಲಿ ಬುಧವಾರ 6.1 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಪರಪರೌಮು ಪ್ರಾಂತದ ವಾಯವ್ಯದಲ್ಲಿ 76 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರೀಕೃತಗೊಂಡಿತ್ತು. ಬಳಿಕ ಹಲವು ಪಶ್ಚಾತ್ಕಂಪನ ಸಂಭವಿಸಿದ್ದರಿಂದ ಜನತೆ ಗಾಭರಿಗೊಂಡು ಮನೆಯಿಂದ ಹೊರಗೋಡಿ ಬಂದರು. ಭೂಕಂಪದಿಂದ ನಾಶನಷ್ಟದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ನ್ಯೂಝಿಲ್ಯಾಂಡ್ನ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.