ಚಿಕ್ಕಮಗಳೂರು | ಲೈಂಗಿಕ ದೌರ್ಜನ್ಯಕ್ಕೊಳಗಾದ ದಲಿತ ಯುವತಿಗೆ ಅವಮಾನ ಆರೋಪ: ದಲಿತ, ಪ್ರಗತಿಪರ ಸಂಘಟನೆಗಳಿಂದ ಧರಣಿ

ಚಿಕ್ಕಮಗಳೂರು, ಫೆ.15: ಹಾಸ್ಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಗೆ ನ್ಯಾಯಕೊಡಿಸಬೇಕಾದ ಪೊಲೀಸರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಇರುವ ವಾಟ್ಸ್‌ಪ್ ಗ್ರೂಪ್‌ನಲ್ಲಿ ಅವಾಚ್ಯ ಶಬ್ಧ ಬಳಕೆ ಮಾಡಿ ದಲಿತ ಸಮುದಾಯದ ಯುವತಿಗೆ ಅವಮಾನ ಮಾಡಿದ್ದು, ಈ ಸಂಬಂಧ ಎಸ್ಪಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಧರಣಿ ನಡೆಸಿ ಜಿಲ್ಲಾ ಪಂಚಾಯತ್ ಕಚೇರಿಯವರೆಗೆ ಕಾಲ್ನಡಿ ಜಾಥಾ ನಡೆಸಿದರು.
ಬುಧವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು, ನಗರ ಠಾಣೆಯ ಪಿಎಸ್ಸೈ ಜಯರಾಮ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರಾ ಅವರು ದಲಿತ ವಿರೋಧಿ ನಿಲುವು ಪ್ರದರ್ಶಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ದಲಿತ ಮೇಲಿನ ದೌರ್ಜನ್ಯಗಳನ್ನು ತಡೆಯುವನ್ನು ವಿಫಲರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪನಿದೇಶಕಿ ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತರಾಗಿದ್ದರೂ ಅವರ ವಿರುದ್ಧ ಯಾವುದೇ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಇತ್ತೀಚೆಗೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕಾಲೇಜು ಯುವತಿಯೊಬ್ಬಳಿಗೆ ಲೈಂಗಿ ಕ ದೌರ್ಜನ್ಯವಾಗಿದೆ. ಇಂತಹ ಗಂಭೀರ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸಬೇಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ಘಟನೆ ಬಗ್ಗೆ ಅಪಹಾಸ್ಯ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈ ಘಟನೆ ಸಂಬಂಧ ನಗರಠಾಣೆಯ ಪಿಎಸ್ಸೈ ಜಯರಾಮ್ ಎಂಬವರು ಪೊಲೀಸರೇ ಇರುವ ವಾಟ್ಸ್‌ಪ್ ಗ್ರೂಪ್‌ನಲ್ಲಿ ಆಶ್ಲೀಲ, ಅವಾಚ್ಯ ಪದ ಬಳಕೆ ಮಾಡಿ ಚಾಟ್ ಮಾಡಿದ್ದಾರೆ. ಈ ಅಧಿಕಾರಿಯ ಕಿಡಿಗೇಡಿ ವರ್ತನೆ ಬಗ್ಗೆ ಎಸ್ಪಿಗೆ ದೂರು ನೀಡಿ ತಿಂಗಳು ಕಳೆದರೂ ಠಾಣಾಧಿಕಾರಿ ವಿರುದ್ಧ ಯಾವುದೇ ಕಾನೂನು ಕ್ರಮವಹಿಸಿಲ್ಲ ಎಂದು ದೂರಿದರು.
ಈ ಘಟನೆ ನಡೆಯಲು ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಈ ಘಟನೆ ಬಗ್ಗೆ ಪೊಲೀಸರು ಬೇಲಿಯೇ ಎದ್ದು ಹೊಲ ಮೇಯ್ದಂತೆ, ಕೀಳು ಪದ ಬಳಕೆ ಮಾಡಿ ಯುವತಿಗೆ ಅವಮಾನ ಮಾಡಿದ್ದಾರೆ. ಯುವತಿ ದಲಿತ ಸಮುದಾಯದವಳು ಎಂಬ ಕಾರಣಕ್ಕೆ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ ಅವರು, ಎಸ್ಪಿ ಉಮಾ ಪ್ರಶಾಂತ್ ಅವರಿಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ಪಿಎಸ್ಸೈ ಜಯರಾಮ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲಾಖಾ ತನಿಖೆ ನಡೆಸಿ ಕೆಲಸದಿಂದ ವಜಾ ಮಾಡುವುದಲ್ಲದೇ ಅಧಿಕಾರಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಧರಣಿ ಬಳಿಕ ಆಝಾದ್ ಪಾರ್ಕ್ ವೃತ್ತದಿಂದ ಜಿಪಂ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಮುಖಂಡರು ಜಿಪಂ ಸಿಇಒ ಜಿ.ಪ್ರಭು ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಧರಣಿಯಲ್ಲಿ ಕೂದುವಳ್ಳಿ ಮಂಜುನಾಥ್, ಹುಣಸೆಮಕ್ಕಿ ಲಕ್ಷ್ಮಣ್, ಎಸ್‌ಡಿಪಿಐ ಸಂಘಟನೆಯ ಗೌಸ್ ಮುನೀರ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ, ರವೀಶ್ ಬಸಪ್ಪ, ಸುರೇಶ್, ತರೀಕೆರೆ ಸ್ವಾಮಿ ಇದ್ದರು.







