ಕೋತಿ ಕೃಷ್ಣ ಸೇರಿ ಮೂವರನ್ನು ಜೈಲಿನಲ್ಲಿಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು, ಫೆ.15: ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ರೌಡಿ ಕೃಷ್ಣಪ್ಪ ಯಾನೆ ಕೋತಿ ಕೃಷ್ಣ ಸೇರಿದಂತೆ ಮೂವರನ್ನು ಬಂಧಿಸಿ ಕೇಂದ್ರ ಕಾರಾಗೃಹದಲ್ಲಿಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಪಿ ರೌಡಿಶೀಟರ್ ಕೃಷ್ಣಪ್ಪ ಯಾನೆ ಕೋತಿ ಕೃಷ್ಣ(51) ವಿರುದ್ಧ ಮಾದಕ ವಸ್ತು ಸರಬರಾಜು ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಗುಂಡಾ ಕಾಯ್ದೆ ಅಡಿ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಬಿಡಲು ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ, ಜಿಗಣಿ ಪೊಲೀಸ್ ಠಾಣೆ ರೌಡಿಪಟ್ಟಿಯಲ್ಲಿರುವ ಮಂಜೇಶ್, ವೃತ್ತಿಯಲ್ಲಿ ಚಾಲಕನಾಗಿದ್ದರೂ, ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ. ಗುಂಡ ಕಾಯ್ದೆ ಅಡಿ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಿದ್ದಾರೆ.
ಅದೇ ರೀತಿ, ಹೆಬ್ಬಗೋಡಿ ಪೊಲೀಸ್ ಠಾಣೆ ರೌಡಿ ಪಟ್ಟಿಯಲ್ಲಿರುವ ಮಂಜುನಾಥನನ್ನು ಗುಂಡಾ ಕಾಯ್ದೆ ಅಡಿ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







