ಸಂವಿಧಾನದ ರಕ್ಷಣೆ ಇಂದಿನ ತುರ್ತು ಕರ್ತವ್ಯ: ವಾಸುದೇವ ಮುದೂರು
ಉಡುಪಿ ಜಿಲ್ಲಾ ಮಟ್ಟದ ‘ಅಂಬೇಡ್ಕರ್ ಓದು’ ಅಭಿಯಾನ ಸಮಾರೋಪ
ಕುಂದಾಪುರ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಾಜದ ಕೆಲವೇ ವರ್ಗದವರ ಪರವಾಗಿರದೇ ಸಮಾಜದ ಎಲ್ಲಾ ವರ್ಗದ ಜನರ ದನಿಯಾಗಿ, ನಿರಂತರ ಶ್ರಮವರಿಯದ ಸಮರೋಪಾದಿಯ ಹೋರಾಟ ಮಾಡಿದವರು. ಅದರ ಫಲವೇ ಹೆಮ್ಮೆಯ ಸಂವಿಧಾನವಾಗಿದ್ದು, ಅದನ್ನು ಜತನದಿಂದ ರಕ್ಷಿಸುವುದು ಇಂದಿನ ನಮ್ಮ ತುರ್ತು ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಸಂಘಟನಾ ಸಂಚಾಲಕ ವಾಸುದೇವ ಮುದೂರು ಅಭಿಪ್ರಾಯಪಟ್ಟಿದ್ದಾರೆ.
ಈ ಶೈಕ್ಷಣಿಕ ವರ್ಷದುದ್ದಕ್ಕೂ ನಡೆದ ಜಿಲ್ಲಾ ಮಟ್ಟದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು. ಅಂಬೇಡ್ಕರ್ ವಿಚಾರಧಾರೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ತಮ್ಮ ಅರಿವನ್ನು ವಿಸ್ತರಿಸುವುದು ಶಾಲಾಶಿಕ್ಷಣದ ಬಹು ಮುಖ್ಯ ಭಾಗವಾಗಬೇಕು ಎಂದವರು ಹೇಳಿದರು.
ಕಳೆದ ವರ್ಷ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಭಾವಚಿತ್ರ ಹಸ್ತಾಂತರದೊಂದಿಗೆ ಆರಂಭವಾದ ಈ ಕಾರ್ಯಕ್ರಮ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನದ ಕುರಿತಾದ ಯಾವುದೇ ಒಂದು ಮಹತ್ವದ ಘಟನೆಯನ್ನು ಆಧರಿಸಿದ ವೀಡಿಯೋ ಭಾಷಣ, ಜೈ ಭೀಮ್ ಕ್ವಿಜ್, ಪೋಸ್ಟರ್ ರಚನೆ, ಸಂವಿಧಾನ ಪ್ರಸ್ತಾವನೆಯ ಸಮೂಹಗಾನ, ಅಂಬೇಡ್ಕರ್ ಹಾಗೂ ಅವರಿಗೆ ಸಂಬಂಧಿಸಿದ ಯಾವುದೇ ಘಟನೆಯನ್ನು ಆಧರಿಸಿದ ಚಿತ್ರ ರಚನೆ ಇತ್ಯಾದಿ ಸ್ಪರ್ಧೆಗಳೊಂದಿಗೆ, ಸಮಾರೋಪ ಸಮಾರಂಭ ಹಾಗೂ ಅಂಬೇಡ್ಕರ್ ಬದುಕು, ಬರಹ, ಚಿಂತನೆಗಳನ್ನು ಆಧರಿಸಿದ ಕಿರುನಾಟಕ ಉತ್ಸವ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ, ಅಂಬೇಡ್ಕರ್ ಸಮಗ್ರ ಬರಹ, ಭಾಷಣದ ಒಂದು ಪ್ರತಿ ಹಾಗೂ ಸಂವಿಧಾನ ಓದು ಕೃತಿಗಳನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಉಪಾಧ್ಯಕ್ಷ ಅಜಯಕುಮಾರ್, ಕೋಟೇಶ್ವರ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ರಾಕೇಶ ಶೆಟ್ಟಿ ಉಪಸ್ಥಿತರಿದ್ದರು.
ಕಿರು ನಾಟಕ ಉತ್ಸವದಲ್ಲಿ ಸಂತಮೇರಿ ಪ್ರೌಢಶಾಲೆ ಕುಂದಾಪುರ, ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಮತ್ತು ಸರಕಾರಿ ಪ್ರೌಢಶಾಲೆ ಗುಜ್ಜಾಡಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗ್ಗಿನ ಕಾರ್ಯಕ್ರಮದಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು, ಪಡುಕೋಣೆ ಜನಶಕ್ತಿ ಸೇವಾ ಟ್ರಸ್ಟ್ನ ಫಿಲಿಪ್ ಡಿಸೋಜಾ, ಚಿಂತಕ ರಾಮಕೃಷ್ಣ ಹೆರ್ಳೆ, ಕುಂದಾಪುರ ಪೊಲೀಸ್ ಠಾಣಾಧಿಕಾರಿ ಪ್ರಸಾದ್ ಕುಮಾರ್ ಹಾಗೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಪಸ್ಥಿತರಿದ್ದರು.
ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು ಸ್ವಾಗತಿಸಿ ಅಂಬೇಡ್ಕರ್ ಓದು ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದರು. ಗುಜ್ಜಾಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಆರಂಭಗೀತೆ ಹಾಡಿದರು. ಸಮುದಾಯ ಕುಂದಾಪುರದ ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಮುದಾಯ ಕುಂದಾಪುರ, ಬುಧ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.