ಡಾ.ಅಶ್ವತ್ಥನಾರಾಯಣ ಹೇಳಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ

ಉಡುಪಿ: ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂಬ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರ ಹೇಳಿಕೆ ಅಘಾತಕಾರಿ. ದೇವಾಲಯದ ಆವರಣ ದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಜನರನ್ನು ಈ ರೀತಿ ಹಿಂಸೆಗೆ ಪ್ರಚೋದಿಸುವ ಬಿಜೆಪಿ ಸಚಿವರ ಹೇಳಿಕೆ ಹತಾಶೆಯ ಪ್ರತೀಕ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸುಳ್ಳು ಹೇಳಿಕೆಗಳಿಂದ ಜನರು ಬಿಜೆಪಿ ಆಡಳಿತದಲ್ಲಿ ಈಗಾಗಲೇ ಭ್ರಮನಿರಸನ ಗೊಂಡಿದ್ದು ಮುಂದಿನ ಅವಧಿಗೆ ತಮಗೆ ಬಹುಮತ ಬರಲಾರದು ಎಂಬ ಅರಿವಿನಿಂದಲೇ ಬಿಜೆಪಿಯು ಜನರನ್ನು ಪ್ರಚೋದಿಸುವ ಷಡ್ಯಂತ್ರ ರೂಪಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಸಿದ್ದರಾಮಯ್ಯ, ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಗೌರವಿಸುವ ಗುಣ ವನ್ನು ಹೊಂದಿದವರು. ಅವರ ಆಡಳಿತಾವಧಿಯಲ್ಲಿ ಎಲ್ಲಾ ವರ್ಗಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಿದ್ದರು. ಹಾಗೂ ದೇಶಕ್ಕಾಗಿ ಕೊಡುಗೆ ನೀಡಿದ ಎಲ್ಲಾ ವರ್ಗಗಳ ಮಹಾ ಪುರುಷರುಗಳನ್ನು ಗೌರವಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಆದರೆ ಬಿಜೆಪಿ ಮುಖಂಡರು ಯಾವಾಗಲೂ ಟಿಪ್ಪು, ಮುಸ್ಲಿಂ, ಪಾಕಿಸ್ತಾನ ಎಂಬ ಜಪದಲ್ಲಿಯೇ ಕಾಲಹರಣ ಮಾಡುತಿದ್ದಾರೆ. ದೇಶದ ಅಭಿವೃದ್ಧಿಯ ಬಗ್ಗೆ, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಚಿಂತಿಸದಿರುವುದು ದೌರ್ಭಾಗ್ಯ ಎಂದು ಸಚಿವರ ಪ್ರಚೋದನಾಕಾರಿ ಭಾಷಣಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.







