ಬಂಟ್ವಾಳ ಸರ್ವೆ ಇಲಾಖೆಯಲ್ಲಿ ಎ.ಡಿ.ಎಲ್.ಆರ್ ಇಲ್ಲದೆ ಪರದಾಟ: ಸಾರ್ವಜನಿಕರ ದೂರು

ಬಂಟ್ವಾಳ : ಬಂಟ್ವಾಳ ತಾಲೂಕು ಭೂ ದಾಖಲೆಗಳ ಕಚೇರಿಯಲ್ಲಿ ಸಹಾಯಕ ನಿರ್ದೇಶಕರು ಇಲ್ಲದೆ ತಿಂಗಳಿನಿಂದ ಸಾರ್ವಜನಿಕ ಕೆಲಸದ ಕಡತಗಳು ವಿಲೇವಾರಿಯಾಗದೆ ಬಾಕಿಯಾಗಿದ್ದು, ಸಾರ್ಜನಿಕರು ಪರದಾಟ ನಡೆಸುವಂತಾಗಿದೆ ಎಂದು ದೂರಿದ್ದಾರೆ.
ಬಂಟ್ವಾಳ ತಾಲೂಕಿನ ಎ.ಡಿ.ಎಲ್.ಆರ್ ಗೆ ಬಂಟ್ವಾಳ ಸಹಿತ ಉಳ್ಳಾಲ ಹಾಗೂ ಸುಳ್ಯ ತಾಲೂಕಿನ ಜವಾಬ್ದಾರಿಯೂ ಇದ್ದು, ಇದೀಗ ಅಧಿಕಾರಿ ರಜೆಯಲ್ಲಿರುವುದರಿಂದ ಈ ಎಲ್ಲಾ ತಾಲೂಕುಗಳ ಜನರ ಭೂ ಸಂಬಂಧಿ ಕಡತಗಳೂ ಸದ್ಯ ವಿಲೇವಾರಿ ಇಲ್ಲದೆ ಬಾಕಿಯಾಗಿದೆ.
ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಬಂಟ್ವಾಳ ಎ ಡಿ ಎಲ್ ಆರ್ ರಜೆಯಲ್ಲಿದ್ದಾರೆ ಎನ್ನಲಾಗುತ್ತಿದ್ದು, ಮಂಗಳೂರು ಎ ಡಿ ಎಲ್ ಆರ್ ಅವರಿಗೆ ಮೂಡಬಿದ್ರೆ ಹಾಗೂ ಮುಲ್ಕಿ, ಪುತ್ತೂರು ಅಧಿಕಾರಿಗೆ ಕಡಬ ಹೆಚ್ಚುವರಿ ಜವಾಬ್ದಾರಿ ಇರುತ್ತದೆ . ಬೆಳ್ತಂಗಡಿ ತಾಲೂಕು ಎ ಡಿ ಎಲ್ ಆರ್ ಅಧಿಕಾರಿಗೆ ಯಾವುದೇ ಹೆಚ್ಚುವರಿ ಹೊಣೆಗಾರಿಕೆ ಇರುವುದಿಲ್ಲ. ತಾಲೂಕಿನ ಜನರ ಸಮಸ್ಯೆಯನ್ನು ನಿವಾರಿಸುವರೇ ಇತರ ತಾಲೂಕಿನ ಎ ಡಿ ಎಲ್ ಆರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನಾದರೂ ನೀಡಿ ಸದ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂಟ್ವಾಳದ ಸರ್ವೆ ಇಲಾಖಾ ಕಚೇರಿಯ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಜನರ ಭೂ ಸಂಬಂಧಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.