ಜನರ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

ಗದಗ, ಫೆ. 16: ‘ಎಲ್ಲಿಯ ವರೆಗೆ ನನ್ನ ಮೇಲೆ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯ ವರೆಗೆ ನನ್ನನ್ನು ಯಾರಿಂದಲೂ ಏನು ಮಾಡಲು ಆಗುವುದಿಲ್ಲ. ಇಂತಹ ಹಗಲುಗನಸು ಕಾಣುವುದನ್ನು ಸಚಿವ ಡಾ.ಅಶ್ವಥ್ ನಾರಾಯಣ ನಿಲ್ಲಿಸಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಜಿಲ್ಲೆಯ ಶಿರಹಟ್ಟಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನನನ್ನು ಯುದ್ಧದಲ್ಲಿ ಬ್ರಿಟಿಷರು ಕೊಂದಂತೆ ನನ್ನನ್ನು ಕೊಲ್ಲಿ’ ಎಂದು ಅಶ್ವಥ್ ನಾರಾಯಣ ಜನರಿಗೆ ಪ್ರಚೋದನೆ ನೀಡಿದ್ದಾರೆ. ಆದರೆ, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
‘ರಾಜ್ಯದಲ್ಲಿ ಅತ್ಯಂತ ಭ್ರಷ್ಟ, ಕೋಮುವಾದಿ ಸರಕಾರ ಅಧಿಕಾರದಲ್ಲಿದೆ. ಬಿಜೆಪಿಯವರಿಂದ ತಳ ಸಮುದಾಯದ ಜನರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಶಿರಹಟ್ಟಿಯಲ್ಲಿ 14 ಮಂದಿ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ, ಒಬ್ಬರಿಗೆ ಮಾತ್ರ ಟಿಕೇಟ್ ನೀಡಲು ಸಾಧ್ಯ, ಉಳಿದ 13 ಮಂದಿ ಒಬ್ಬರ ಕಾಲು ಇನ್ನೊಬ್ಬರು ಎಳೆಯದೆ, ಪಕ್ಷ ಘೋಷಿಸಿದ ಅಭ್ಯರ್ಥಿಯ ಸಹಾಯಕ್ಕೆ ನಿಂತು ಕೋಮುವಾದಿ ಬಿಜೆಪಿ ಸೋಲಿಸಲು ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಅವರು ಮನವಿ ಮಾಡಿದರು.
‘ಎರಡು ತಿಂಗಳಲ್ಲಿ ಚುನಾವಣೆ ಬರಲಿದೆ. ಬಸವರಾಜ ಬೊಮ್ಮಾಯಿ ಸರಕಾರ ಇನ್ನು 60 ದಿನಗಳಾದ ಮೇಲೆ ಮನೆಗೆ ಹೋಗುತ್ತದೆ. ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಸರಕಾರ ರಚನೆ ಮಾಡಿದ್ದಾರೆ. ಹೀಗೆ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದವರಿಂದ ಅಭಿವೃದ್ಧಿ ಸಾಧ್ಯವೇ?’ ಎಂದು ಸಿದ್ದರಾಮಯ್ಯ ಟೀಕಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ ಚುನಾವಣೆ ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಎಂದಿದ್ದಾರೆ. ಯುವಜನರಿಗೆ ಕೆಲಸ, ರೈತರ ಜಮೀನಿಗೆ ನೀರು, ಬಡವರಿಗೆ ಅನ್ನ ಇದನ್ನು ಚರ್ಚೆ ಮಾಡದೆ ಅಬ್ಬಕ್ಕ ವರ್ಸಸ್ ಟಿಪ್ಪು ಬಗ್ಗೆ ಯೋಚನೆ ಮಾಡಿ ಮತ ನೀಡುತ್ತೀರ? ಮಹಾತ್ಮ ಗಾಂಧಿ ವರ್ಸಸ್ ಸಾವರ್ಕರ್, ಗಾಂಧಿ ವರ್ಸಸ್ ಗೋಡ್ಸೆ ಎಂದು ಗಾಂಧಿ ಹಂತಕರನ್ನು ಆರಾಧಿಸುತ್ತಿದ್ದಾರೆ. ಇಂತಹವರ ಕೈಗೆ ಮತ್ತೆ ಅಧಿಕಾರ ನೀಡುತ್ತೀರ?’ ಎಂದು ಅವರು ಪ್ರಶ್ನಿಸಿದರು.
‘ನನ್ನನ್ನು ಮುಗಿಸಬೇಕೆಂದು ಜನರನ್ನು ಪ್ರಚೋದಿಸುತ್ತಿದ್ದಾರೆ. ಒಂದಂತು ಸತ್ಯ, ಎಲ್ಲಿಯವರೆಗೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಶ್ವಥ್ ನಾರಾಯಣ ಅವರೇ ನೀವು ಹಗಲುಗನಸು ಕಾಣುತ್ತಿದ್ದೀರ. ಜನರನ್ನು ಪ್ರಚೋದನೆ ಮಾಡಲು ಹೋದರೆ ಜನ ಅದಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.
‘200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿ ತಿಂಗಳಿಗೆ 2ಸಾವಿರ ರೂ. ನೀಡುವ ಎರಡೂ ಯೋಜನೆ ಘೋಷಿಸಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 40 ಸಾವಿರ ಕೋಟಿ ರೂ.ಖರ್ಚು ಬರುತ್ತದೆ. ಇದಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟಿದ್ದೇವೆ. ಕೊಟ್ಟ ಮಾತಿಗೆ ನಾವು ತಪ್ಪಿದರೆ ಒಂದು ಸೆಕೆಂಡ್ ರಾಜಕೀಯದಲ್ಲಿ ಇರುವುದಿಲ್ಲ. ಧೈರ್ಯವಾಗಿ ನೀವು ನಮ್ಮನ್ನು ನಂಬಿ, ಮತ ಹಾಕಬಹುದು’
-ಸಿದ್ದರಾಮಯ್ಯ ವಿಪಕ್ಷ ನಾಯಕ







