ರಾಣಾ ಅಯ್ಯುಬ್ ವಿರುದ್ಧ 14 ಸೆಕೆಂಡ್ ಗಳಿಗೊಮ್ಮೆ ಆನ್‌ಲೈನ್ ದಾಳಿ: ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್ ವರದಿ

ಹೊಸದಿಲ್ಲಿ, ಫೆ. 16: ಪತ್ರಕರ್ತೆ ರಾಣಾ ಅಯ್ಯುಬ್(Rana Ayyub) ರನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ‘ಆನ್ಲೈನ್ ಹಿಂಸಾಚಾರ’ದ ಸ್ಪಷ್ಟ ಉದ್ದೇಶ ಅವರ ಬಾಯಿ ಮುಚ್ಚಿಸುವುದಾಗಿದೆ. ಆದರೆ, ಅವರ ಮೇಲಿನ ದಾಳಿ ಹೆಚ್ಚಿದಷ್ಟೂ ಅವರು ನೀಡುವ ತಿರುಗೇಟು ಹೆಚ್ಚು ತೀವ್ರವಾಗಿರುತ್ತದೆ ಎಂದು ನ್ಯೂಯಾರ್ಕ್ ನ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್(ICFJ)ನ ವರದಿಯೊಂದು ಹೇಳಿದೆ.
ಅಗಾಧ ಪ್ರಮಾಣದಲ್ಲಿ ದತ್ತಾಂಶಗಳನ್ನು ಬಳಸಿಕೊಂಡು ಸಂಶೋಧನೆ ನಡೆಸಿ ‘ರಾಣಾ ಅಯ್ಯುಬ್: ಟಾರ್ಗೆಟಡ್ ಆನ್ಲೈನ್ ವಾಯಲೆನ್ಸ್ ಎಟ್ ದ ಇಂಟರ್ಸೆಕ್ಷನ್ ಆಫ್ ಮಿಸೋಜನಿ ಆ್ಯಂಡ್ ಇಸ್ಲಾಮೋಫೋಬಿಯ’ (ಮಹಿಳಾ ದ್ವೇಷ ಮತ್ತು ಇಸ್ಲಾಮೋಫೋಬಿಯದ ಮರೆಯಲ್ಲಿ ಅಯ್ಯುಬ್ ಮೇಲೆ ನಡೆಸಲಾಗುವ ಆನ್ಲೈನ್ ದಾಳಿ) ಎಂಬ ಹೆಸರಿನ ವರದಿಯನ್ನು ತಯಾರಿಸಲಾಗಿದೆ. ರಾಣಾ ಅಯೂಬ್ ವಿರುದ್ಧ, ಮುಖ್ಯವಾಗಿ ಟ್ವಿಟರ್ ನಲ್ಲಿ ನಡೆಸಲಾಗುತ್ತಿರುವ ಆನ್ಲೈನ್ ಹಿಂಸಾಚಾರ ಅಭಿಯಾನದ ಬಗ್ಗೆ ವರದಿಯಲ್ಲಿ ವಿಶ್ಲೇಷಣೆ ನಡೆಸಲಾಗಿದೆ.
2019 ಡಿಸೆಂಬರ್ ನಿಂದ 2022 ಮಾರ್ಚ್ ವರೆಗಿನ ಅವಧಿಯಲ್ಲಿ ರಾಣಾರನ್ನು ಗುರಿಯಾಗಿಸಿ ಮಾಡಲಾಗಿರುವ ಸುಮಾರು 1.3 ಕೋಟಿ ಟ್ವೀಟ್ ಗಳನ್ನು ವಿಶ್ಲೇಷಿಸಲಾಗಿದೆ.
ರಾಣಾ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ತೀವ್ರ ಕಿರುಕುಳ ಎದುರಿಸಿರುವರಾದರೂ, ಅವರು ಆನ್ಲೈನ್ ಹಿಂಸಾಚರಕ್ಕೆ ಅತಿಯಾಗಿ ಒಳಗಾಗಿರುವುದು ಟ್ವಿಟರ್ನಲ್ಲಿ. ಟ್ವಿಟರ್ ನಲ್ಲಿ ಅವರು 15 ಲಕ್ಷ ಫಾಲೋವರ್ಗಳನ್ನು ಹೊಂದಿದ್ದಾರೆ.
ಅವರ ವಿರುದ್ಧದ ಆನ್ಲೈನ್ ಅಭಿಯಾನದ 62.05% ಭಾಗವು ಲಿಂಗ ತಾರತಮ್ಯದ, ಸ್ತ್ರೀ ದ್ವೇಷಿ, ಲೈಂಗಿಕ ಕಿರುಕುಳದ ಮತ್ತು ಜನಾಂಗೀಯವಾದಿ ವೈಯಕ್ತಿಕ ದಾಳಿಯಾಗಿದೆ ಎಂದು ವರದಿ ಹೇಳುತ್ತದೆ.







