ಬಲಿಪ ನಾರಾಯಣ ಭಾಗವತ ನಿಧನ

ಮಂಗಳೂರು, ಫೆ.16: ತೆಂಕುತಿಟ್ಟಿನ ಹೆಸರಾಂತ ಭಾಗವತ, ಬಲಿಪ ಶೈಲಿಯ ಹಾಡುಗಾರಿಕೆಗೆ ಖ್ಯಾತರಾಗಿರುವ ಬಲಿಪ ನಾರಾಯಣ ಭಾಗವತ (85) ಗುರುವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಬಲಿಪ ಮಾಧವ ಭಟ್-ಸರಸ್ವತಿ ದಂಪತಿಯ ಪುತ್ರನಾಗಿ 1938ರ ಮಾ.13ರಂದು ಜನಿಸಿದ್ದ ಬಲಿಪ ನಾರಾಯಣ ಭಾಗವತರು ಪ್ರಸ್ತುತ ಮೂಡುಬಿದಿರೆ ತಾಲ್ಲೂಕಿನ ಮಾರೂರು ಸಮೀಪದ ನೂಯಿಯಲ್ಲಿ ವಾಸವಾಗಿದ್ದರು.
ತೆಂಕುತಿಟ್ಟು ಯಕ್ಷ ರಂಗದ ಭೀಷ್ಮ ಎಂದೇ ಖ್ಯಾತರಾಗಿರುವ ಬಲಿಪರು ತೆಂಕುತಿಟ್ಟಿನ ಹಿರಿಯ ಭಾಗವತರಾಗಿದ್ದರು. ತನ್ನ 13ನೇ ವಯಸ್ಸಿಗೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದ ಅವರು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. 60 ವರ್ಷಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಕ್ಷಗಾನದ ಹಲವು ಪ್ರಸಂಗಗಳನ್ನು ಹಾಗೂ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದರು. ಐದು ದಿನಗಳ ಕಾಲ ಪ್ರದರ್ಶಿಸುವ ದೇವೀ ಮಹಾತ್ಮೆ ಮಹಾಪ್ರಸಂಗವನ್ನು ರಚಿಸಿದ್ದರು. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ಕೂಡ ರಚಿಸಿದ್ದಾರೆ.
ಬಲಿಪ ನಾರಾಯಣ ಭಾಗವತರಿಗೆ 75 ವರ್ಷ ತುಂಬಿದ ಸಂದರ್ಭ ಅಭಿಮಾನಿಗಳು ಅವರ ಮನೆಯ ಸಮೀಪ ‘ಬಲಿಪ ಅಮೃತ ಭವನ’ವನ್ನು ನಿರ್ಮಿಸಿ ಗೌರವ ಸಲ್ಲಿಸಿದ್ದರು.
*ಇಬ್ಬರು ಪುತ್ರರಾದ ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪ ಕೂಡ ಭಾಗವತರಾಗಿದ್ದರು. ಈ ಪೈಕಿ ಪ್ರಸಾದ ಬಲಿಪ ನಿಧನರಾಗಿದ್ದಾರೆ. ಇನ್ನೊಬ್ಬ ಪುತ್ರ ಮಾಧವ ಬಲಿಪ ಹಿಮ್ಮೇಳ ಕಲಾವಿದರಾಗಿದ್ದರೆ, ಮತ್ತೊಬ್ಬ ಪುತ್ರ ಶಶಿಧರ್ ಬಲಿಪ ಕೃಷಿಕರಾಗಿದ್ದಾರೆ.
*ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ‘ಜ್ಞಾನ ಪ್ರಶಸ್ತಿ’ ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಪ್ರಶಸ್ತಿ, ‘ಅಗರಿ ಪ್ರಶಸ್ತಿ’ ಶೇಣಿ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ, ಪಾರ್ತಿಸುಬ್ಬ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.