ರಾಮಸೇತು: ಸುಬ್ರಮಣಿಯನ್ ಸ್ವಾಮಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಅಸ್ತು

ಹೊಸದಿಲ್ಲಿ, ಫೆ. 16: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂಬುದಾಗಿ ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ(Subramanian Swamy) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ನಿಗದಿಪಡಿಸಲು ಸುಪ್ರೀಂ ಕೋರ್ಟ್(Supreme Court) ಗುರುವಾರ ಒಪ್ಪಿದೆ.
ಈ ವಿಷಯದಲ್ಲಿ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ, ಹಾಗಾಗಿ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈಗ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದಾಗಿ ಬಿಜೆಪಿ ನಾಯಕ ಸ್ವಾಮಿ ಮಾಡಿದ ಮನವಿಯನ್ನು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್(D.Y. Chandrachud) ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ(P. S. Narasimha) ಅವರನ್ನೊಳಗೊಂಡ ನ್ಯಾಯಪೀಠವೊಂದು ಪುರಸ್ಕರಿಸಿತು.
‘‘ಸಾಂವಿಧಾನಿಕ ಪೀಠದ ಪ್ರಕರಣಗಳು ಮುಗಿದಾಗ ನಾವು ಅದನ್ನು ವಿಚಾರಣೆಗೆ ಎತ್ತಿಕೊಳ್ಳುತ್ತೇವೆ’’ ಎಂದು ಮುಖ್ಯ ನ್ಯಾಯಾಧೀಶ ಹೇಳಿದರು.
ರಾಮ ಸೇತುವನ್ನು ‘ಆ್ಯಡಮ್ಸ್ ಬ್ರಿಜ್’ ಎಂಬುದಾಗಿಯೂ ಕರೆಯುತ್ತಾರೆ. ಅದು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಆಳವಿಲ್ಲದ ಸ್ಥಳದಲ್ಲಿರುವ ಕಲ್ಲಿನ ರಚನೆಯಾಗಿದೆ.







