840 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ ಏರ್ ಇಂಡಿಯಾ

ಹೊಸದಿಲ್ಲಿ, ಫೆ. 16: ಏರ್ ಇಂಡಿಯಾ (Air India) ಜಗತ್ತಿನ ಎರಡು ಅತಿ ದೊಡ್ಡ ವಿಮಾನ ತಯಾರಕ ಕಂಪೆನಿಯಾದ ಏರ್ ಬಸ್ ಹಾಗೂ ಬೋಯಿಂಗ್ ನೊಂದಿಗೆ 840 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಟಾಟಾ ಸಮೂಹ(Tata Group) ನಿರ್ವಹಿಸುತ್ತಿರುವ ಏರ್ ಇಂಡಿಯಾ (Air india)ಏರ್ಲೈನ್ಸ್ 470 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ.
ಉಳಿದ 370 ವಿಮಾನಗಳು ಆಯ್ಕೆಯಾಗಿರಲಿದೆ ಎಂದು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ನಿಪುಣ್ ಅಗರ್ವಾಲ್(Nipun Agarwal) ಬುಧವಾರ ತಿಳಿಸಿದ್ದಾರೆ. ‘‘ಈ ಬೇಡಿಕೆ ಸಂಸ್ಥೆಗೆ 470 ವಿಮಾನಗಳು, 370 ಆಯ್ಕೆಯ ವಿಮಾನಗಳು ಹಾಗೂ ಮುಂದಿನ ದಶಕದ ವರೆಗೆ ಏರ್ಬಸ್ ಹಾಗೂ ಬೋಯಿಂಗ್ ನಿಂದ ಖರೀದಿ ಹಕ್ಕುಗಳನ್ನು ಒಳಗೊಂಡಿದೆ.
ಎಂಜಿನ್ ಗಳನ್ನು ದೀರ್ಘಕಾಲ ನಿರ್ವಹಿಸಲು ನಾವು ಸಿಎಫ್ಎಂ ಇಂಟರ್ನ್ಯಾಷನಲ್, ರೋಲ್ಸ್-ರೋಯ್ಸ್ ಹಾಗೂ ಜಿಇ ಏರೋಸ್ಪೇಸ್ ನೊಂದಿಗೆ ಕೂಡ ಒಪ್ಪಂದ ಮಾಡಿಕೊಂಡಿದ್ದೇವೆ’’ ಎಂದು ಅಗರ್ವಾಲ್ ಅವರು ಲಿಂಕೆಡ್ಇನ್ನಲ್ಲಿ ಬರೆದುಕೊಂಡಿದ್ದಾರೆ. ಯುರೋಪ್ ನ ಏರ್‌ಬಸ್‌ನಿಂದ 250 ವಿಮಾನಗಳು ಹಾಗೂ ಅಮೆರಿಕದ ಬೋಯಿಂಗ್ನಿಂದ 220 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಏರ್ ಇಂಡಿಯಾ ಮಂಗಳವಾರ ಹೇಳಿತ್ತು.
ಇದು ವಾಣಿಜ್ಯ ವಿಮಾನ ಚರಿತ್ರೆಯಲ್ಲಿ ಜಗತ್ತಿನಲ್ಲೇ ಏಕ ಕಂತಿನ ಅತಿ ದೊಡ್ಡ ಒಪ್ಪಂದವಾಗಿದೆ.







