ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತ: ಪುತ್ತೂರಿನ ಹಿರಿಯ ವಕೀಲ ಮೃತ್ಯು

ಪುತ್ತೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಪುತ್ತೂರಿನ ಹಿರಿಯ ವಕೀಲರೊಬ್ಬರು ಮೃತಪಟ್ಟಿದ್ದಾರೆ.
ಪುತ್ತೂರಿನ ಹಿರಿಯ ನ್ಯಾಯವಾದಿ ನಗರದ ಎಪಿಎಂಸಿ ರಸ್ತೆ ನೆಲ್ಲಿಕಟ್ಟೆ ನಿವಾಸಿ ಕೆ.ಪಿ.ಜೇಮ್ಸ್ ಮೃತರು. ಅವರು ತನ್ನ ಪತ್ನಿಯೊಂದಿಗೆ ತಮಿಳುನಾಡು ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಫೆ.15ರ ತಡ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೆ.ಪಿ.ಜೇಮ್ಸ್ ಮತ್ತು ಅವರ ಪತ್ನಿ ಇಬ್ಬರು ಫೆ.15ರಂದು ಸಂಜೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲ್ಲಿದ್ದ ಅವರು ರಾತ್ರಿ ವೇಳೆ ಕೆ.ಪಿ.ಜೇಮ್ಸ್ ಶೌಚಾಲಯಕ್ಕೆಂದು ಹೋದವರು ಹೃದಯಾಘಾತಕ್ಕೊಳಗಾಗಿ ಕಣ್ಣೂರು ಮತ್ತು ಕ್ಯಾಲಿಕಟ್ ಮಧ್ಯೆ ರೈಲಿನಿಂದ ಬಿದ್ದಿರಬಹುದು ಎಂದು ತಿಳಿದು ಬಂದಿದೆ. ತನ್ನ ಗಂಡ ಶೌಚಾಲಯಕ್ಕೆ ಹೋದವರು ಬಾರದೆ ಇರುವುದನ್ನು ನೋಡಲು ಹೋದಾಗ ಗಂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಕಿರುಚಾಡಿದಾಗ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದಿದ್ದಾರೆ ಎಂದು ರೈಲಿನಲ್ಲಿದ್ದ ಉಳಿದವರ ಗಮನಕ್ಕೆ ಬಂದಿದೆ.
ತಕ್ಕೇರಿ ಬಳಿಯ ಧರ್ಮಡಮ್ ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆ ಮಾಡಿದ ರೈಲ್ವೇ ಪೊಲೀಸರು ತನ್ನೇರಿಯ ಆಸ್ಪತ್ರೆಯ ಶವಾಗರ ಕೊಠಡಿಯಲ್ಲಿ ಇರಿಸಿದ್ದರು. ಕೆ.ಪಿ ಜೇಮ್ಸ್ ಅವರ ಪತ್ನಿ ಕೂಡಾ ತಲ್ವೇರಿಯಲ್ಲಿ ನನ್ನ ಗಂಡ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿಗೆ ಸಂಬಂಧಿಸಿ ರೈಲ್ವೇ ಪೊಲೀಸರು ಪತ್ತೆಯಾದ ಮೃತ ದೇಹವನ್ನು ಪರಿಶೀಲಿಸಿ ಮೃತ ದೇಹದ ಜೊತೆಯಲ್ಲಿದ್ದ ವಕೀಲ ಸದಸ್ಯತ್ವದ ಗುರುತು ಚೀಟಿ ಮತ್ತು ಭಾವಚಿತ್ರ ಆಧಾರಿಸಿ ಮೃತ ದೇಹ ಕೆ.ಪಿ. ಜೇಮ್ಸ್ ಅವರದ್ದು ಎಂದು ಗೊತ್ತುಪಡಿಸಿದ್ದಾರೆ.