ಮಂಗಳೂರು: ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ; ದೂರು

ಮಂಗಳೂರು, ಫೆ.16: ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹಣ ದ್ವಿಗುಣ ಗಳಿಸುವ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು 18.43 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2022ರ ಡಿ.14ರಂದು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿಯ ವಾಟ್ಸಾಪ್ ಸಂದೇಶವನ್ನು ನಂಬಿ ಆತ ಕಳಿಹಿಸಿದ ಟೆಲಿಗ್ರಾಂ ಚಾನಲ್‌ಗೆ ಸದಸ್ಯರಾಗಿದ್ದರು ಎನ್ನಲಾಗಿದೆ.
ಆ ಚಾನೆಲ್ ಮೂಲಕ ವೆಬ್‌ಸೈಟ್‌ವೊಂದರಲ್ಲಿ ನೋಂದಣಿ ಮಾಡುವಂತೆ ತಿಳಿಸಿದ ಮೇರೆಗೆ ನೋಂದಣಿ ಮಾಡಿಸಿಕೊಂಡಿದ್ದರು. ಡಿ.18ರಂದು ಪ್ರಥಮವಾಗಿ 9 ಸಾವಿರ ರೂ. ತಮ್ಮ ಬ್ಯಾಂಕ್ ಖಾತೆಯಿಂದ ಪಾವತಿಸಿದ್ದು, ಈ ಹಣವು ಮರಳಿ ಬಂದಿದೆ. ಬಳಿಕ ಹಂತ ಹಂತವಾಗಿ ಹಣ ಕಳುಹಿಸುವಂತೆ ತಿಳಿಸಿದ್ದು ಅವರು ಕಳುಹಿಸಿದ ಹಣವು ವೆಬ್‌ಸೈಟ್ ಖಾತೆಯಲ್ಲಿ ದ್ವಿಗುಣಗೊಂಡಿರುವಂತೆ ಕಾಣಿಸುತ್ತಿತ್ತು. ಅದನ್ನು ನಂಬಿದ ವ್ಯಕ್ತಿಯು ಹೆಚ್ಚಿನ ಲಾಭ ಗಳಿಸುವ ಆಸೆಯಿಂದ 18,43,000 ರೂ.ವನ್ನು ಹಂತ ಹಂತವಾಗಿ ಕಳುಹಿಸಿದ್ದರು. ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಲ್ಲಿ ಪುನಃ ಹಣ ಪಾವತಿಸುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





