ರೈಲ್ವೆ ನಿಲ್ದಾಣಗಳ ಅಧ್ಯಯನ ಪ್ರವಾಸಕ್ಕೆ ಸಮಿತಿ ಸದಸ್ಯರ ಮನವಿ

ಮಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳಲ್ಲಿ ಬಳಕೆದಾರರ ಹಿತದೃಷ್ಟಿಯಿಂದ ಅವರಿಗೆ ಪೂರಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಲು ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳ ಅಧ್ಯಯನ ಪ್ರವಾಸಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ (ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿ) ಅಹ್ಮದ್ ಬಾವಾ ಪಡೀಲ್ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಪಾಲಕ್ಕಾಡ್‌ನಲ್ಲಿ ನಡೆದ ದಕ್ಷಿಣ ರೈಲ್ವೆ ವಿಭಾಗೀಯ ರೈಲ್ವೆ ಬಳಕೆದಾರರ (ಪಾಲಕ್ಕಾಡ್ ವಿಭಾಗ) ಸಲಹಾ ಸಮಿತಿಯಲ್ಲಿ ಈ ಬಗ್ಗೆ ಮಾಡಿದ ಮನವಿಗೆ ಅಧಿಕಾರಿಗಳಿಂದ ಸ್ಪಂದನ ಸಿಕ್ಕಿವೆ. ಮಂಗಳೂರಿನ ಎರಡು ನಿಲ್ದಾಣಗಳ ಅಭಿವೃದ್ಧಿ ಮತ್ತು ಬಳಕೆದಾರರಿಗೆ ಗರಿಷ್ಠ ಸೇವೆ ನೀಡಲು ಬೇಕಾದ ಯೋಜನೆ ರೂಪಿಸಲು ಅಧ್ಯಯನ ಪ್ರವಾಸದ ಅಗತ್ಯವಿದೆ ಎಂದು ಅಹ್ಮದ್ ಬಾವಾ ಪಡೀಲ್ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಒಂದು ಟಿಕೆಟ್ ಯಂತ್ರ ಮಾತ್ರವಿದೆ. ಆದರೆ ಇದರಿಂದ ಬಳಕೆದಾರರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಹಾಗಾಗಿ ರೈಲ್ವೆ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಮೂರು ಸ್ವಯಂಚಾಲಿತ ಟಿಕೆಟ್ ಯಂತ್ರ ವಿತರಿಸಲು ಮನವಿ ಮಾಡಲಾಗಿತ್ತು. ಇತ್ತೀಚೆಗೆ ನಡೆದ ಸಭೆಯಲ್ಲಿ ದಕ್ಷಿಣ ರೈಲ್ವೆ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಈ ವರ್ಷದ ಮಾರ್ಚ್‌ನಲ್ಲಿ ಟಿಕೆಟ್ ಯಂತ್ರಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಂಗಳೂರು ಸೆಂಟ್ರಲ್‌ನಲ್ಲಿ ಇಲೆಕ್ಟ್ರಾನಿಕ್ ಕೋಚ್ ಡಿಸ್‌ಪ್ಲೇ ಇಂಡಿಕೇಟರ್ ಮತ್ತು ಇಲೆಕ್ಟ್ರಾನಿಕ್ ಪ್ಲಾಟ್‌ಫಾರಂ ಡಿಸ್‌ಪ್ಲೇ ಬೋರ್ಡ್‌ಗಳನ್ನು ರೈಲುಗಳ ಆಗಮನ ಮತ್ತು ನಿರ್ಗಮನದ ಮಾಹಿತಿಗಾಗಿ ಹಾಕಬೇಕು ಎಂದು ಒತ್ತಾಯಿಸಲಾಗಿತ್ತು. ಅದಕ್ಕೂ ಅಧಿಕಾರಿಗಳು ಸ್ಪಂದಿಸಿದ್ದಾರೆ. ಡಿಸ್‌ಪ್ಲೇ ಅಳವಡಿಕೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಅದರಲ್ಲಿ ೫ ಲೈನ್ ಟ್ರ್ತ್ರೈನ್ ಆಗಮನ/ ನಿರ್ಗಮನ ಬೋರ್ಡ್ ಹಾಗೂ ಎಟ್ ಎ ಗ್ಲಾನ್ಸ್ ಡಿಸ್‌ಪ್ಲೇ ಬೋರ್ಡ್‌ಗಳು ಸೇರಿವೆ. ಅವುಗಳನ್ನು ಟಿಕೆಟ್ ಕೌಂಟರ್ ಪ್ರದೇಶದಲ್ಲಿ ಅಳವಡಿಸುವ ಬಗ್ಗೆ ತ್ರಿಲೋಕ್ ಕೊಠಾರಿ ತಿಳಿಸಿರುವುದಾಗಿ ಅಹ್ಮದ್ ಬಾವಾ ಪಡೀಲ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನಿಂದ ಕಾಯಂಕುಳಂಗೆ ಮೆಣಸು ಮತ್ತು ಕುಂಭಕೋಣಂಗೆ ಅಡಕೆ ಸಾಗಿಸಲಾಗುತ್ತದೆ. ಆದರೆ ಅಲ್ಲಿನ ನಿಲ್ದಾಣಗಳಲ್ಲಿ ಕೇವಲ ಒಂದೆರೆಡು ನಿಮಿಷ ಮಾತ್ರ ರೈಲುಗಳ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಮೆಣಸು ಮತ್ತು ಅಡಕೆಯನ್ನು ಅನ್‌ಲೋಡ್ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ನಿಲುಗಡೆ ಸಮಯವನ್ನು ಹೆಚ್ಚಿಸಬೇಕು ಎಂಬ ಮನವಿಗೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ ಸಿಕ್ಕಿವೆ.
ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್‌ನಿಂದ ಮಡಗಾಂವ್ ಮೂಲಕ ಮುಂಬೈಗೆ ವಂದೇಭಾರತ್ ಎಕ್ಸ್‌ಪ್ರೆಸ್ ರೈಲ್ವೆ ಓಡಿಸಲು ಆಗ್ರಹಿಸಲಾಗಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದ ಮೇಲ್ಛಾವಣಿಯ ಕಾಮಗಾರಿ ಪೂರ್ಣ ಗೊಳಿಸಬೇಕು ಎಂಬ ಮನವಿಗೂ ದಕ್ಷಿಣ ರೈಲ್ವೆ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಸ್ಪಂದಿಸಿದ್ದಾರೆ ಎಂದರು.